ಮಾಯಕೊಂಡ: ದಾವಣಗೆರೆಯಿಂದ ಆನಗೋಡು, ಕೊಡಗನೂರು ಕ್ರಾಸ್, ಮಾಯಕೊಂಡ, ಸಾಸಲು ಮಾರ್ಗವಾಗಿ ಹೊಳಲ್ಕೆರೆಗೆ ಹಾಗೂ ಇನ್ನೂ ಮುಂದಿನ ದೂರದ ಸ್ಥಳಗಳಿಗೆ ಪ್ರಯಾಣಿಸಲು ಇರುವ ಕೆಎಸ್ಆರ್‌ಟಿಸಿ ಬಸ್‌ಗಳು ಎರಡು ತಿಂಗಳಿಂದ ಆ ಮಾರ್ಗ ಬದಲಿಸಿ ಬಾಡ ಕ್ರಾಸ್ ಮೂಲಕ ಸಂಚರಿಸುತ್ತಿವೆ. ಇದರಿಂದ ಮೇಲ್ಕಾಣಿಸಿದ ಗ್ರಾಮಗಳ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ಎರಡು ತಿಂಗಳಿಂದ ಕೊಡಗನೂರು ಕೆರೆ ಏರಿ ದುರಸ್ತಿ ಕಾರ್ಯ ನಡೆಯುತ್ತಿದೆ. ದುರಸ್ತಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಾಗೂ ಎಲ್ಲ ಲಘು ವಾಹನಗಳು ಕೊಡಗನೂರು ಮಾರ್ಗವಾಗಿ ಬೊಮ್ಮೇನಹಳ್ಳಿ, ಪರಶುರಾಂಪುರ ಮೂಲಕ ಹೊಳಲ್ಕೆರೆ ರಸ್ತೆ ಸೇರಿ ಸಂಚರಿಸುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಅಧಿಕಾರಿಗಳ ಆದೇಶದಂತೆ ಕೆಲ ದಿನಗಳವೆರೆಗೆ ಮಾತ್ರ ಸಂಚರಿಸಿದ್ದ ನಿಗಮದ ಬಸ್‌ಗಳು, ಹಳ್ಳಿದಾರಿಯಲ್ಲಿ ಸುತ್ತಿಕೊಂಡು ಹೋಗಬೇಕು ಎಂದು ಆನಗೋಡು ಮಾರ್ಗವನ್ನು ಬಿಟ್ಟು ಬಾಡ ಕ್ರಾಸ್ ಬಳಿಯೇ ಮಾರ್ಗ ಬದಲಿಸಿಕೊಂಡು ಹೋಗುತ್ತಿವೆ.
ಈ ಬಗ್ಗೆ ದಾವಣಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರಶ್ನಿಸಿದರೆ, ‘ನಮ್ಮದು ಎಕ್ಸ್‌ಪ್ರೆಸ್ ಬಸ್. ಸುತ್ತಿಕೊಂಡು ಹೋದರೆ ಸಮಯದ ಅಭಾವ ಆಗುತ್ತದೆ. ಮೇಲಧಿಕಾರಿಗಳೇ ಮಾರ್ಗ ಬದಲಿಸುವಂತೆ ಸೂಚಿಸಿದ್ದಾರೆ. ಕೊಡಗನೂರು ಮಾರ್ಗದಲ್ಲಿ ರಸ್ತೆ ಜಾಮ್ ಆಗಿದೆ’ ಎಂಬ ಹತ್ತಾರು ಸಬೂಬು ಹೇಳಿಕೊಂಡು ಬಾಡಕ್ರಾಸ್, ಬಾಡ, ಸಂತೇಬೆನ್ನೂರು ಮೂಲಕ ಸಾಸಲು ಹಳ್ಳಕ್ಕೆ ಬಂದು ಹೊಳಲ್ಕೆರೆ ಹೋಗುತ್ತಿದ್ದಾರೆ.
ಇದರಿಂದ ಆನಗೋಡು, ನೇರ್ಲಿಗೆ, ಕೊಡಗನೂರು, ಮಾಯಕೊಂಡ, ಬಾವಿಹಾಳು, ನರಗನಹಳ್ಳಿ, ಹುಚ್ಚವ್ವನಹಳ್ಳಿ, ಹಿಂಡಸಕಟ್ಟೆ, ಬಸವಾಪುರ, ಅಂದನೂರು, ಗ್ರಾಮಗಳಿಗೆ ಹೊಂದಿಕೊಂಡಿರುವ ಹತ್ತಾರು ಹಳ್ಳಿಗಳ ಸಾವಿರಾರು ಪ್ರಯಾಣಿಕರು ನಿತ್ಯವೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಿತ್ಯವೂ ಬೆಳಿಗ್ಗೆ ದಾವಣಗೆರೆಯಿಂದ ಈ ಮಾರ್ಗದಲ್ಲಿನ ಸರ್ಕಾರಿ ಕಚೇರಿಗಳ ಕೆಲಸ–ಕಾರ್ಯಗಳಿಗೆ, ಶಾಲೆ– ಕಾಲೇಜುಗಳಿಗೆ, ಕಚೇರಿ ಸಮಯಕ್ಕೆ ಬರಲು ಆಗದೆ ಹೈರಾಣಾಗಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಡ್ರೈವರ್, ಕಂಡಕ್ಟರ್ ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತು, ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡು, ಈ ಭಾಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಆಶಯ.
‘ನಮ್ಮೂರ ಮೂಲಕ ಹೋಗುವ ಬಸ್‌ಗಳೆಂದರೆ ಅವು ನಮ್ಮ ಬಸ್‌ಗಳು. ಅವೇ ನಮ್ಮ ಸಂಚಾರಕ್ಕೆ ಆಸರೆ. ಆದರೆ, ಆ ಬಸ್‌ಗಳು ನಮ್ಮೂರು ಬಿಟ್ಟು ಬೇರೆ ಊರ ಮೇಲೆ ಹಾದು ಹೋಗುತ್ತಿರುವುದರಿಂದ ನಮಗೆ ಬಹಳ ದುಃಖವಾಗುತ್ತಿದೆ’ ಎಂಬುದು ಈ ಗ್ರಾಮಗಳ ಜನರ ಅಳಲು.
ಬಸ್‌ಗಳು ಮಾರ್ಗ ಬದಲಿಸದಂತೆ ಕ್ರಮ ಕೈಗೊಳ್ಳಲು ನಿಗಮದ ಅಧಿಕಾರಿಗಳಿಗೆ ಪೋನ್ ಮೂಲಕ ದೂರು ಸಲ್ಲಿಸಿದರೆ. ನೀವೆ ಬಸ್‌ಗಳಿಗೆ ಅಡ್ಡ ಹಾಕಿ ನಿಲ್ಲಿಸಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆಮಂಜಪ್ಪ ರೈಲ್ವೆ ಇಲಾಖೆ ನೌಕರ
ತುರುವೇಕೆರೆ ಹಾಗೂ ಕೆಲ ಡಿಪೋ ಬಸ್‌ಗಳು ಈ ಹಿಂದೆ ಮಾರ್ಗ ಬದಲಿಸಿ ಸಂಚರಿಸುತ್ತಿದ್ದವು. ಆದರೆ ಈಚೆಗೆ ಆ ರೀತಿ ಸಂಚರಿಸಿದ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದುಫಕೃದ್ದೀನ್ ಡಿಟಿಒ ಕೆಎಸ್ಆರ್‌ಟಿಸಿ ದಾವಣಗೆರೆ
ಬದಲಿ ಮಾರ್ಗದಲ್ಲಿ ನಿಗಮದ ಬಸ್‌ಗಳು ಸಂಚರಿಸದಂತೆ ನಿಗಾ ವಹಿಸಲಾಗುವುದು. ಅಂತಹ ಪ್ರಕರಣ ಕಂಡುಬಂದರೆ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಕಿರಣ್ ಕುಮಾರ್ ದಾವಣಗೆರೆ ಕೆಎಸ್‌ಆರ್‌ಟಿಸಿ ಡಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.