
ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅವರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು. ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ‘ಅಹಿಂದ’ ವರ್ಗಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಒತ್ತಾಯಿಸಿದರು.
‘ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ಸಮುದಾಯ ಅಧಿಕವಾಗಿದೆ. ಮುಸ್ಲಿಂ ಮತದಾರರು ನಿರ್ಣಾಯಕವಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡೆಯ ಬಳಿಕ ಎದುರಾದ ಎಲ್ಲ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಅವರು ಅಗಲಿದ ನಂತರವೂ ಇದು ಮುಂದುವರಿಯಬಾರದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮುಸ್ಲಿಂ ಸಮುದಾಯದಲ್ಲಿ ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅವಕಾಶ ಮಾಡಿಕೊಡಬೇಕು. ಕುರುಬ, ನಾಯಕ, ಮರಾಠ ಸೇರಿದಂತೆ ಇತರ ವರ್ಗದ ಜನರು ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ‘ಅಹಿಂದ’ ಸಮುದಾಯದ ಹಿತಾಸಕ್ತಿಯನ್ನು ನಿರ್ಲಕ್ಷಿಸಿ ಶಾಮನೂರು ಕುಟುಂಬಕ್ಕೆ ಮಣೆ ಹಾಕಿದರೆ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಕುಟುಂಬ ರಾಜಕಾರಣದಿಂದ ಜಿಲ್ಲೆಯಲ್ಲಿ ಮಿನಿ ರಿಪಬ್ಲಿಕ್ ಸೃಷ್ಟಿಯಾಗಿದೆ. ಗ್ರಾಮಗಳಿಂದ ಜಿಲ್ಲಾ ಕೇಂದ್ರದವರೆಗೆ ಎಲ್ಲವನ್ನು ಶಾಮನೂರು ಕುಟುಂಬ ನಿಯಂತ್ರಿಸುತ್ತಿದೆ. ಜನರ ಹಿತಾಸಕ್ತಿ, ಜಿಲ್ಲೆಯ ಅಭಿವೃದ್ಧಿಗಿಂತ ಕುಟುಂಬದ ಉದ್ಯಮ ರಕ್ಷಣೆ ಆದ್ಯತೆಯಾಗಿದೆ. ಮತ್ತೆ ಅದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಜನರಿಗೆ ಪ್ರಯೋಜನ ಆಗುವುದಿಲ್ಲ’ ಎಂದರು.
ಉಪಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷದ ಟಿಕೆಟ್‌ಗೆ ಎದುರು ನೋಡುತ್ತಿದ್ದೇನೆ. ಕುಟುಂಬ ರಾಜಕಾರಣದ ವಿರುದ್ಧ ಕೆಲಸ ಮಾಡುತ್ತೇನೆಜಿ.ಬಿ. ವಿನಯಕುಮಾರ್, ಸಂಸ್ಥಾಪಕ ಸ್ವಾಭಿಮಾನಿ ಬಳಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.