ದಾವಣಗೆರೆ: ರಾಜ್ಯ ಸರ್ಕಾರ ನಡೆಸಿದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ) ವೀರಶೈವ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಇಲ್ಲಿನ ಬಿಐಇಟಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ 2 ಕೋಟಿಗೂ ಹೆಚ್ಚಿದೆ. ಜಾತಿ ಗಣತಿಯಲ್ಲಿ ಸಮುದಾಯದ ಜನಸಂಖ್ಯೆಯನ್ನು 60 ಲಕ್ಷ ಎಂದಷ್ಟೇ ತೋರಿಸಲಾಗಿದೆ. ಈ ಮೂಲಕ ನ್ಯಾಯಬದ್ಧವಾಗಿ ಸಮುದಾಯಕ್ಕೆ ಸಿಗುವ ಸೌಲಭ್ಯಕ್ಕೆ ಕತ್ತರಿಹಾಕುವ ಹುನ್ನಾರ ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಜಾತಿ ಗಣತಿ ಕುರಿತು ಒಕ್ಕಲಿಗ ಸಮುದಾಯದ ನಾಯಕರೊಂದಿಗೆ ಚರ್ಚೆ ಮಾಡಿದ್ದೇವೆ. ಮತ್ತೊಂದು ಸುತ್ತಿನ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿತ್ತು. ಈ ವೇಳೆಗೆ ಕೇಂದ್ರ ಸರ್ಕಾರವೂ ಜಾತಿ ಗಣತಿ ನಡೆಸುವ ಘೋಷಣೆ ಮಾಡಿದೆ. ಇದರಿಂದ ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಸ್ವೀಕರಿಸುವ ಸಾಧ್ಯತೆ ಇದೆ’ ಎಂದರು.
‘ಎಲ್ಲ ಜಾತಿ, ಧರ್ಮಕ್ಕೆ ಆಶ್ರಯ ಕಲ್ಪಿಸಿದ್ದು ವೀರಶೈವ ಲಿಂಗಾಯತ ಸಮುದಾಯ. ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡಿದ ವೀರಶೈವ ಲಿಂಗಾಯತರಿಗೆ ಬಹುದೊಡ್ಡ ಪರಂಪರೆ ಇದೆ. ಇಂತಹ ಸಮುದಾಯ ಕವಲು ದಾರಿಯಲ್ಲಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಸಮುದಾಯದ ಐತಿಹಾಸಿಕ ಶ್ರೀಮಂತಿಕೆ ಉಳಿಸಿಕೊಳ್ಳಲು ಒಳಪಂಗಡಗಳು ವಿಘಟನೆ ಆಗದೇ ಒಗ್ಗೂಡಿ ನಡೆಯಬೇಕು’ ಎಂದು ಮಹಾಸಭಾ ಉಪಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
‘ಒಳಪಂಗಡಗಳ ಹೆಸರಿನಲ್ಲಿ ಸಮುದಾಯ ವಿಘಟನೆಯಾದರೆ ಕೇಡುಂಟಾಗುವ ಸಾಧ್ಯತೆ ಇದೆ. ಮುಂದಿನ ದಿನಗಳು ಇನ್ನಷ್ಟು ಕಷ್ಟವಾಗಲಿವೆ. ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆಯಲ್ಲ. ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವ ಎಲ್ಲರೂ ಲಿಂಗಾಯತರು. ಹಿರಿಯರ ಮಾರ್ಗದರ್ಶನದಲ್ಲಿ ಸಮುದಾಯ ಸಂಘಟನೆ ಆಗಬೇಕಿದೆ’ ಎಂದರು.
‘ರಾಜಕೀಯ ಕಲುಷಿತ ಆಗಿದೆ. ಸಮಾಜ ಸೇವೆಯಲ್ಲಿ ಸ್ವಾರ್ಥ ಇಣುಕಿದೆ. ಸಾಮಾಜಿಕ ಬದುಕಿನಲ್ಲಿರುವವರಿಗೆ ಟೀಕೆ ಎದುರಾಗುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸದೇ ನಿಸ್ವಾರ್ಥ ಸೇವೆ ಮಾಡಬೇಕು. ಎಲ್ಲ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ ಹಾಗೂ ಬೆಂಗಳೂರಿನಲ್ಲಿ ಉಚಿತ ವಸತಿ ನಿಲಯ ಕಲ್ಪಿಸುವ ನಿಟ್ಟಿನಲ್ಲಿ ಮಹಾಸಭಾ ತೀರ್ಮಾನ ಕೈಗೊಳ್ಳಲಿದೆ’ ಎಂದು ನುಡಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಐಗೂರು ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಶಾಸಕ ಡಿ.ಜಿ.ಶಾಂತನಗೌಡ, ಚಿಂತಕ ಚಟ್ನಳ್ಳಿ ಮಹೇಶ್, ಉದ್ಯಮಿ ಉಮಾಪತಿ, ಎಸ್.ಜಿ.ಉಳುವಯ್ಯ, ಎಸ್.ಕೆ.ವೀರಣ್ಣ, ಎಂ.ಜಿ.ಶಶಿಕಲಾ, ಸಂದೀಪ್ ಅಣಬೇರು, ಜ್ಯೋತಿ ಜೆಂಬಗಿ, ಎಸ್.ಕೆ. ಶಶಿಧರ್ ಹಾಜರಿದ್ದರು.
ಪಂಚಪೀಠ ಒಗ್ಗೂಡಲು ಸಲಹೆ
‘ವೀರಶೈವ ಸಮುದಾಯದ ಪಂಚಪೀಠಗಳು ಒಗ್ಗೂಡಲು ಸಲಹೆ ನೀಡಿದ್ದೇನೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಒಲವು ತೋರಿದ್ದಾರೆ. ಐದು ಪೀಠಗಳ ಮಠಾಧೀಶರನ್ನು ಒಗ್ಗೂಡಿಸಲು ದಾವಣಗೆರೆಯಲ್ಲಿ ವೇದಿಕೆ ರೂಪಿಸಲಾಗುವುದು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು. ‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಮಠ ಹಾಗೂ ಮಠಾಧೀಶರು ಒಗ್ಗೂಡುವ ಅಗತ್ಯವಿದೆ. ಸಮುದಾಯದ ಹಿತಾಸಕ್ತಿಯಿಂದ ಎಲ್ಲ ಮಠಾಧೀಶರು ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ’ ಎಂದರು.
ಜನಗಣತಿ ಜೊತೆಗೆ ಜಾತಿ ಗಣತಿಯೂ ನಡೆಯಲಿದೆ. ಧರ್ಮ ಜಾತಿ ಒಳಪಂಗಡಗಳ ಕಾಲಂನಲ್ಲಿ ಏನು ಬರೆಸಬೇಕು ಎಂಬ ಸಲಹೆಯನ್ನು ಮಹಾಸಭಾ ಶೀಘ್ರದಲ್ಲೇ ನೀಡಲಿದೆ-ಅಥಣಿ ವೀರಣ್ಣ, ಉಪಾಧ್ಯಕ್ಷ ವೀರಶೈವ ಲಿಂಗಾಯತ ಮಹಾಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.