ADVERTISEMENT

ಕಸ್ಟೊಡಿಯಲ್ ಡೆತ್: ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 2:22 IST
Last Updated 8 ಡಿಸೆಂಬರ್ 2021, 2:22 IST
   

ದಾವಣಗೆರೆ: ಕುಮಾರ್ ಎಂಬ ಯುವಕನ ಕಸ್ಟೊಡಿಯಲ್ ಡೆತ್ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ್ ವಿ. ಹಳ್ಳಿಕೇರಿ ಒತ್ತಾಯಿಸಿದರು.

ದಾವಣಗೆರೆಯ ಸಿಇಎನ್ ಪೊಲೀಸರ ವಶದಲ್ಲಿದ್ದ ಯುವಕ ಕುಮಾರ್‌ ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿದೆ. ಇದರಿಂದ ಸತ್ಯಾಂಶ ಹೊರ ಬರುವ ವಿಶ್ವಾಸ ಇಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಇಎನ್ ಪೊಲೀಸರು ಕುಮಾರ್‌ ಅವರನ್ನು ಬಂಧಿಸಲು ವಾರೆಂಟ್ ಇತ್ತೆ? ಬಂಧಿಸಿದ್ದರೆ ನ್ಯಾಯಾಧೀಶರ ಮುಂದೆ ಹಾಜುರು ಪಡಿಸಲಾಗಿತ್ತೆ? ಬಂಧಿತನನ್ನು ಯಾವ ಕಾರಣಕ್ಕಾಗಿ ಲಾಡ್ಜ್‌ನಲ್ಲಿ ಇರಿಸಲಾಗಿತ್ತು? ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರೆ ವೈದ್ಯಕೀಯ ಪರೀಕ್ಷೆ ಮಾಡಿಸಿದ ವರದಿ ಏನು ಹೇಳುತ್ತದೆ? ಎಂಬ ವಿಚಾರಗಳನ್ನು ತಕ್ಷಣವೇ ಪೊಲೀಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಹುತೇಕ ಲಾಕಪ್ ಡೆತ್ ಅಥವಾ ಕಸ್ಟೋಡಿಯಲ್ ಡೆತ್ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಕುಮಾರ್ ಸಾವಿನ ಪ್ರಕರಣದಲ್ಲೂ ಈ ಯತ್ನ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ರಾಜು ಎಂ.ಎಚ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಾಲತೇಶ್ ಡಿ.ಜಿ, ಉಪಾಧ್ಯಕ್ಷ ಅಭಿಷೇಕ್, ನಟರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.