ADVERTISEMENT

ಶತಕ ಮುಟ್ಟಿದ ಸಾವಿನ ಸಂಖ್ಯೆ

ಜಿಲ್ಲೆಯಲ್ಲಿ 223 ಮಂದಿಗೆ ಕೊರೊನಾ ಸೋಂಕು, 106 ಮಂದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:24 IST
Last Updated 11 ಆಗಸ್ಟ್ 2020, 4:24 IST
ಹರಿಹರ ನಗರ ಪೊಲೀಸ್‍ ಠಾಣೆ ಸಿಬ್ಬಂದಿಗೆ ಕೋವಿಡ್‍ ಸೋಂಕು ದೃಢಪಟ್ಟಿದ್ದರಿಂದ ಠಾಣೆಯನ್ನು ಸೋಮವಾರ ಸೀಲ್‍ಡೌನ್‍ ಮಾಡಲಾಯಿತು.
ಹರಿಹರ ನಗರ ಪೊಲೀಸ್‍ ಠಾಣೆ ಸಿಬ್ಬಂದಿಗೆ ಕೋವಿಡ್‍ ಸೋಂಕು ದೃಢಪಟ್ಟಿದ್ದರಿಂದ ಠಾಣೆಯನ್ನು ಸೋಮವಾರ ಸೀಲ್‍ಡೌನ್‍ ಮಾಡಲಾಯಿತು.   

ದಾವಣಗೆರೆ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿರುವುದು ಸೋಮವಾರ ದೃಢಪಟ್ಟಿದೆ. ಅಲ್ಲಿಗೆ ಕೋವಿಡ್‌ಗೆ ಒಳಗಾಗಿ ಅಸುನೀಗಿದವರ ಸಂಖ್ಯೆ 100ಕ್ಕೆ ಮುಟ್ಟಿದೆ.

ಎಸ್‌ಎಸ್‌ಎಂ ನಗರದ 58 ವರ್ಷದ ಮಹಿಳೆ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ಆ.9ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಇದ್ದ ಲೇಬರ್ ಕಾಲೊನಿಯ 68 ವರ್ಷದ ವೃದ್ಧ, ಶಂಕರವಿಹಾರ ಬಡಾವಣೆಯ 63 ವರ್ಷದ ವೃದ್ಧೆ ಆ.9ರಂದು ಮೃತಪಟ್ಟಿದ್ದಾರೆ.

ಎಸ್.ಎಸ್‌. ಬಡಾವಣೆಯ 49 ವರ್ಷದ ಪುರುಷ ಉಸಿರಾಟದ ಸಮಸ್ಯೆಯಿಂದ ಆ.8ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯ ಜತೆಗೆ ಮಧುಮೇಹ ಇದ್ದ ಹರಿಹರ ಜೆ.ಸಿ. ಬಡಾವಣೆಯ 58 ವರ್ಷದ ಪುರುಷ ಆ.9ರಂದು ಮೃತಪಟ್ಟರು.

ADVERTISEMENT

ಇಂಡಸ್ಟ್ರೀಯಲ್‌ ಏರಿಯಾದ 48 ವರ್ಷದ ಮಹಿಳೆಗೆ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ತು. ಕಕ್ಕರಗೊಳ್ಳದ 62 ವರ್ಷದ ವದ್ಧನಿಗೆ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡದ ಜತೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಎಂ.ಬಿ. ಕೆರೆಯ 62 ವರ್ಷದ ವೃದ್ಧನಿಗೆ ಉಸಿರಾಟದ ಸಮಸ್ಯೆ ಮಾತ್ರ ಇತ್ತು. ಈ ಎಲ್ಲರೂ ಆ.7ರಂದು ನಿಧನರಾದರು.

ಎಚ್‌. ಕಲ‍ಪನಹಳ್ಳಿಯ 48 ವರ್ಷದ ಪುರುಷ, ಹೊಂಡದ ಸರ್ಕಲ್‌ನ 41 ವರ್ಷದ ಪುರುಷ ಉಸಿರಾಟದ ಸಮಸ್ಯೆಯಿಂದ ಆ.6ರಂದು ಮೃತಪಟ್ಟರು. ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇದ್ದ ಬಾಷಾನಗರದ 77 ವರ್ಷದ ವೃದ್ಧ ಆ.8ರಂದು ಅಸುನೀಗಿದರು.

223 ಮಂದಿಗೆ ಸೋಂಕು: ಮೂವರು ಬಾಲಕರು, ನಾಲ್ವರು ಬಾಲಕಿಯರು, 19 ವೃದ್ಧರು, 12 ವೃದ್ಧೆಯರು ಸೇರಿ 223 ಮಂದಿಗೆ ಕೊರೊನಾ ಇರುವುದು ಸೋಮವಾರ ಖಚಿತಪಟ್ಟಿದೆ. 18 ವರ್ಷದಿಂದ 59 ವರ್ಷದೊಳಗಿನ 115 ಪುರುಷರು, 70 ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 112 ಮಂದಿಗೆ ಸೋಂಕು ತಗುಲಿದೆ. ಹೊನ್ನೂರು ಗೊಲ್ಲರಹಟ್ಟಿ, ಕೋಡಿಹಳ್ಳಿ, ಕೊಂಡಜ್ಜಿ, ಬಸವನಾಳ್‌, ತೋಳಹುಣಸೆ, ಈಚಘಟ್ಟ, ತರಗನಹಳ್ಳಿ ಹೀಗೆ ಏಳು ಮಂದಿಯನ್ನು ಬಿಟ್ಟರೆ ಉಳಿದ ಎಲ್ಲರೈ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ. ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 12 ಮಂದಿಗೆ ಸೋಂಕು ಬಂದಿದೆ. ಜಂಗಮರ ಬೀದಿ ಒಂದರಲ್ಲೇ 10 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಮೂವರು ಪೊಲೀಸರು, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ಸಿಬ್ಬಂದಿಗೂ ಬಂದಿದೆ.

ಹರಿಹರ ತಾಲ್ಲೂಕಿನಲ್ಲಿ ಒಂದೇ ದಿನ 60 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಚನ್ನಗಿರಿ ತಾಲ್ಲೂಕಿನ 20, ಜಗಳೂರಿನ 12, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 17 ಮಂದಿಗೆ ಕೊರೊನಾ ಇರುವುದು ಗೊತ್ತಾಗಿದೆ. ರಾಣೆಬೆನ್ನೂರಿನ ಒಬ್ಬರು ಮತ್ತು ಹೂವಿನಹಡಗಲಿಯ ಒಬ್ಬರು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಇಬ್ಬರಿಗೂ ಸೋಂಕು ಇರುವುದು ಪತ್ತೆಯಾಗಿದೆ.

106 ಮಂದಿ ಬಿಡುಗಡೆ: ಏಳು ವೃದ್ಧೆಯರು, 8 ವೃದ್ಧರು, ನಾಲ್ಕು ಬಾಲಕರು, ಐವರು ಬಾಲಕಿಯರು ಸೇರಿದಂತೆ 10 ಮಂದಿ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 3658 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 2333 ಮಂದಿ ಗುಣಮುಖರಾಗಿದ್ದಾರೆ. 100 ಮಂದಿ ಮೃತಪಟ್ಟಿದ್ದಾರೆ. 1225 ಪ್ರಕರಣಗಳು ಸಕ್ರಿಯವಾಗಿವೆ. 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.