ADVERTISEMENT

ಸಿ.ಜಿ. ಆಸ್ಪತ್ರೆ ಕೋವಿಡ್‌ಗೆ ಸೀಮಿತಗೊಳಿಸಲು ಆದೇಶ

ಆಡಿಯೊ ಪರಿಣಾಮ: ಹೆರಿಗೆ, ಇತರ ರೋಗಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯಕ್ಕೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಮೇ 2020, 12:43 IST
Last Updated 9 ಮೇ 2020, 12:43 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ದಾವಣಗೆರೆ: ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಅವ್ಯವಸ್ಥೆಗಳ ಬಗ್ಗೆ ಶನಿವಾರ ಹರಿದಾಡಿದ ಆಡಿಯೊ ಪರಿಣಾಮ ಬೀರಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಕೊರೊನಾ ವೈರಸ್‌ಗೆ ಸಂಬಂಧಿಸಿದ್ದನ್ನು ಹೊರತುಪಡಿಸಿ ಉಳಿದ ಯಾವುದೇ ರೋಗಗಳಿಗೆ ಚಿಕಿತ್ಸೆ ಪಡೆಯಲು ಅವಕಾಶ ನಿರಾಕರಿಸಲಾಗಿದೆ. ಜತೆಗೆ ಆಡಿಯೊ ಮಾಡಿ ಹರಿಯಬಿಟ್ಟವರ ಮೇಲೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.

ಆಡಿಯೊದಲ್ಲಿ ಇರುವ ವಿಚಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈ ನಿರ್ಧಾರಗಳನ್ನು ತಿಳಿಸಿದ್ದಾರೆ.

ಕೋವಿಡ್ ಬಿಟ್ಟು ಉಳಿದ ಕಾಯಿಲೆಗಳಿಗೆ ಬಾಪೂಜಿ, ಎಸ್‌ಎಸ್ ಆಸ್ಪತ್ರೆ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬೇರೆ ಕಾಯಿಲೆಗಳಿಗೆ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರಲು ಜಿಲ್ಲೆಯ ಜನರು ಭಯಬೀತರಾಗಿದ್ದರು. ಈ ನಿಟ್ಟಿನಿಲ್ಲಿ ಪ್ರತ್ಯೇಕವಾಗಿ ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಕ್ರಮ ಪಾಲಿಸಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ತಪಾಸಣೆ ನಡೆಸಬೇಕು. ಜೊತೆಗೆ ನಗರದ ಒಳಗಡೆ ಬರುವ ಹಾಗೂ ಹೊರಗಡೆ ಹೋಗುವವರ ಬಗ್ಗೆ ನಿಗಾ ವಹಿಸಬೇಕು. ಕಂಟೈನ್‌ಮೆಂಟ್ ಜೋನ್ ಅಲ್ಲಿರುವವರ ಎಲ್ಲ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಹೋರಾಡಬೇಕು ಎಂದರು.

ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಮಾತನಾಡಿ, ಕೋವಿಡ್‌ಗಾಗಿ ಸಿಮೀತವಾಗಿವಾಗಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯವರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಾರದು. ಇದು ಸ್ಪಷ್ಟ ಮಾರ್ಗಸೂಚಿ ಎಂದು ಹೇಳಿದರು.

ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಯಾವುದೇ ಆರೋಗ್ಯ ಸಿಬ್ಬಂದಿ, ವೈದ್ಯರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಅದೇ ಸಮಯದಲ್ಲಿ ಕೆಲಸ ಮಾಡುವಂತಿಲ್ಲ. ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ರೋಗದ ಲಕ್ಷಣ ಇರುವವರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಸ್.ಎ. ರವೀಂದ್ರನಾಥ್, ಅಬ್ದುಲ್‌ ಜಬ್ಬಾರ್‌, ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಸಿಇಒ ಪದ್ಮಾ ಬಸವಂತಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.