ADVERTISEMENT

ಬಸವಣ್ಣ ಅರ್ಥವಾಗಿದ್ದರೆ, ಕೋಮುಭಾವನೆ ಕೆರಳುತ್ತಿರಲಿಲ್ಲ: ಎ.ಬಿ.ರಾಮಚಂದ್ರಪ್ಪ

ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎ.ಬಿ.ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:30 IST
Last Updated 20 ಜುಲೈ 2024, 15:30 IST
<div class="paragraphs"><p> ಎ.ಬಿ.ರಾಮಚಂದ್ರಪ್ಪ</p></div>

ಎ.ಬಿ.ರಾಮಚಂದ್ರಪ್ಪ

   

ದಾವಣಗೆರೆ: ‘ಲಿಂಗಾಯತ ಮಠಗಳು ಬಸವಣ್ಣನನ್ನು ಗಂಭೀರವಾಗಿ ಅರ್ಥ ಮಾಡಿಕೊಂಡಿದಿದ್ದರೆ, ಕರ್ನಾಟಕದಲ್ಲಿ ಇಂದು ಕೋಮುವಾದಿ ರಾಜಕಾರಣ ಕಾಲಿಡುತ್ತಿರಲಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ರಂಗ ಪರಿಷತ್ತು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಲಿಂಗಾಯತ ಧರ್ಮ ಕರ್ನಾಟಕಕ್ಕೆ ಅಲ್ಲದೆ ಭಾರತಕ್ಕೇ ಬೇಕಾದ ಧರ್ಮ. ಬಸವಣ್ಣ ನಮಗೆ ಅರ್ಥವಾಗಿದ್ದಲ್ಲಿ ದೇಶದಲ್ಲಿ ಕೋಮುಭಾವನೆ, ಜಾತೀಯತೆ ಭಾವನೆ ಕೆರಳುತ್ತಿರಲಿಲ್ಲ. ಸಾಮಾಜಿಕ ಕಸವನ್ನು ಹರಡಲು ಸಾಂಸ್ಕೃತಿಕ ನಾಯಕರನ್ನು ಬಳಸಿಕೊಳ್ಳುತ್ತಿರಲಿಲ್ಲ’ ಎಂದು ವಿಷಾದಿಸಿದರು.

‘ರಾಮ ಕೋಮುವಾದಿಯಲ್ಲ. ಆದರೆ, ಆತನನ್ನು ಕೋಮುವಾದದ ಸಾಂಸ್ಕೃತಿಕ ನಾಯಕನನ್ನಾಗಿ ಗುರುತಿಸಿದ್ದೇವೆ. ಜೈ ಶ್ರೀ ರಾಮ್ ಘೋಷಣೆ ಹಾಕುತ್ತಲೇ ಕೋಮು ಭಾವನೆ ಜತೆಗೆ ಭಕ್ತಿಯನ್ನು ಬೀದಿಗೆ ತಂದಿದ್ದೇವೆ’ ಎಂದು ವಿಷಾದಿಸಿದರು.

‘ಬಸವಣ್ಣನ ಚಿಂತನೆ ಮರೆಮಾಚಿ ಮೌಢ್ಯಗಳನ್ನು ಬಿತ್ತುವ ಹುನ್ನಾರವೇ ನಾಗರ ಪಂಚಮಿ. ಒಂದು ಸಮುದಾಯದ ಜನರು ಪೌಷ್ಟಿಕ ಆಹಾರವನ್ನು ದೇವರಿಗೆ ಚೆಲ್ಲುವ ಮೂಲಕ ಶೂದ್ರ ಜನರಿಗೆ ತಲುಪದಂತೆ ನೋಡಿಕೊಳ್ಳುತ್ತಿದ್ದಾರೆ. ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಬಡ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಿದೆ. ಮಠಾಧೀಶರೂ ಕೈ ಜೋಡಿಸುತ್ತಿದ್ದಾರೆ’ ಎಂದರು.

‘ಪ್ರಶಸ್ತಿಗಾಗಿ ಸರ್ಕಾರದ ಸಂಘ-ಸಂಸ್ಥೆಗಳು ಹಾಗೂ ಕೆಲವೊಮ್ಮೆ ಮಠಗಳಿಂದಲೂ ಲಾಭಿ ನಡೆಯುತ್ತವೆ. ಅದಕ್ಕೆ ಬೇರೆ ವ್ಯವಸ್ಥೆಗಳೇ ಇರುತ್ತವೆ. ಸಚಿವರು, ಶಾಸಕರ ಶಿಫಾರಸಿದ್ದವರು ಹಾಗೂ ಅವರ ಹಿಂಬಾಲಕರಿಗೇ ಸ್ಥಾನಮಾನ ಸಿಗುತ್ತಿವೆ. ಅರ್ಹರಿಂದ ಅವು ದೂರವಾಗಿವೆ’ ಎಂದು ಸಾನ್ನಿಧ್ಯ ವಹಿಸಿದ್ದ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘ದೈಹಿಕವಾಗಿ ಅಂಗವಿಕಲರಾಗಿದ್ದ ಸಿ.ಜಿ.ಕೃಷ್ಣಮೂರ್ತಿ ಮಾನಸಿಕ ಸದೃಢರಾಗಿದ್ದರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ, ಸಿನಿಮಾ ಸಂಭಾಷಣಾಕಾರರಾಗಿಯೂ ಕಾರ್ಯ ನಿರ್ವಹಿಸಿದರು. ಏಕಲವ್ಯನಂತೆ ಎಲ್ಲವನ್ನೂ ಸಾಧಿಸಿದರು. ಅನೇಕ ನಾಟಕಗಳ ನಿರ್ದೇಶನ ಮಾಡಿದರು’ ಎಂದು ರಂಗಕರ್ಮಿ ಎಚ್.ಎಸ್. ದ್ಯಾಮೇಶ್ ಹೇಳಿದರು.

ಚಿಕ್ಕಬೆನ್ನೂರಿನ ಜಿ.ಎಚ್. ರುದ್ರೇಶ್ ಅವರಿಗೆ ಸಿ.ಜಿ.ಕೆ ಪ್ರಶಸ್ತಿ ಹಾಗೂ ವಿಭೂತಿ ಬಸವಾನಂದ ಅವರಿಗೆ ಬಸವಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸಾಪುರ ಶ್ರೀ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎಸ್.ನಾಗರಾಜಪ್ಪ, ರಂಗಕರ್ಮಿ ಎನ್.ಎಸ್. ರಾಜು, ಜಿ.ಎಸ್. ಲಿಂಗರಾಜ್, ಹಿರಿಯ ಪತ್ರಕರ್ತ ನಾಗರಾಜ್ ಬಡದಾಳ್ ಇದ್ದರು. ಬಿ.ಇ. ತಿಪ್ಪೇಸ್ವಾಮಿ ಸಂಗಡಿಗರಿಂದ ಸುಗಮ ಸಂಗೀತ ಗಾಯನ, ಬಿ. ಹನುಮಂತಾಚಾರಿ ಸಂಗಡಿಗರಿಂದ ವೀರಗಾಸೆ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.