ಚಂದ್ರಶೇಖರ್ ಸಂಕೋಳ್
ದಾವಣಗೆರೆ: ತಾಲ್ಲೂಕಿನ ಬಿಸಿಲೇರಿ ಗ್ರಾಮದ ತೋಟದಲ್ಲಿ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾದ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್ ಅವರ ಮೃತದೇಹದ ಅವಶೇಷಗಳ ಖಚಿತತೆಗೆ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಹದಡಿ ಠಾಣೆಯ ಪೊಲೀಸರು ಚುರುಕುಗೊಳಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳ ತಂಡ ನೀಡುವ ವರದಿ ಆಧರಿಸಿ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸಾಕ್ಷ್ಯಗಳನ್ನು ಕಲೆಹಾಕಿದೆ. ಕಾರಿನಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದೆ. ಅಮಲು ಭರಿಸುವ ಪದಾರ್ಥ ಇತ್ತೇ ಎಂಬ ನಿಟ್ಟಿನಲ್ಲಿ ಪರಿಶೀಲಿಸುತ್ತಿದೆ. ಅವಶೇಷ ಪರೀಕ್ಷಿಸಿ ವೈದ್ಯಕೀಯ ವರದಿ ನೀಡಲಿದ್ದು, ಇದರ ಆಧಾರದ ಮೇರೆಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.
‘ತೋಟದಲ್ಲಿ ಪತ್ತೆಯಾದ ಕಾರು ಸಂಪೂರ್ಣ ಭಸ್ಮವಾಗಿದೆ. ಮೃತದೇಹ ಕೂಡ ಬೂದಿಯಾಗಿದ್ದು, ಕೆಲ ಮೂಳೆಗಳು ಮಾತ್ರ ಸಿಕ್ಕಿವೆ. ಮೇಲ್ನೋಟಕ್ಕೆ ಇದು ಚಂದ್ರಶೇಖರ್ ಸಂಕೋಳ್ ಅವರ ಮೃತದೇಹ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದರ ಖಚಿತತೆಗೆ ಡಿಎನ್‌ಎ ಪರೀಕ್ಷೆ ಮಾತ್ರವೇ ಉಳಿದಿರುವ ಮಾರ್ಗ. ಮಕ್ಕಳ ರಕ್ತದ ಮಾದರಿಗಳನ್ನು ಪಡೆದು ಪ್ರಕ್ರಿಯೆ ಆರಂಭಿಸಬೇಕಿದೆ. ಹೀಗಾಗಿ, ಮೃತದೇಹದ ಅವಶೇಷಗಳನ್ನು ಇನ್ನೂ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿಲ್ಲ’ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಮಕ್ಕಳ ಆತ್ಮಹತ್ಯೆ ಯತ್ನದಿಂದ ಮನನೊಂದಿದ್ದ ಚಂದ್ರಶೇಖರ್ ಸಂಕೋಳ್, ದುಡುಕಿನಲ್ಲಿ ತೋಟಕ್ಕೆ ತೆರಳಿದ್ದರು. ತೋಟದ ಹೊರಭಾಗದಲ್ಲಿ ಕಾರು ಪತ್ತೆಯಾಗಿದೆ. ಇದು ಆತ್ಮಹತ್ಯೆಯೇ? ಅಥವಾ ಕೊಲೆಯೇ? ಎಂಬುದು ಕೂಡ ದೃಢವಾಗಬೇಕಿದೆ. ಈ ನಿಟ್ಟಿನಲ್ಲಿಯೂ ಹದಡಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಸಂಕೋಳ್ ಮೇಲೆ ಮುನಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವ ಅವರ ಇಬ್ಬರು ಮಕ್ಕಳಿಗೆ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜ.10ರಂದು ರಾತ್ರಿ ತಂದೆಯೊಂದಿಗೆ ಗಲಾಟೆ ಮಾಡಿಕೊಂಡ ಪುತ್ರಿ ಪವಿತ್ರಾ (24) ಹಾಗೂ ಪುತ್ರ ನರೇಶ್ (22) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಮನೆಗೆ ಧಾವಿಸಿದ ಸಂಕೋಳ್‌ಗೆ ಆಘಾತವಾಗಿತ್ತು. ಮಕ್ಕಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರು ಕಾರಿನಲ್ಲಿ ಜಮೀನಿಗೆ ತೆರಳಿದ್ದರು. ಜ.11ರಂದು ಸಂಕೋಳ್ ಅವರ ಮೃತದೇಹ ಅವಶೇಷಗಳ ರೂಪದಲ್ಲಿ ಸುಟ್ಟ ಕಾರಿನಲ್ಲಿ ಪತ್ತೆಯಾಗಿತ್ತು.
ಕೋಟ್ಯಂತರ ರೂಪಾಯಿ ಸಾಲ
ದಾರುಣವಾಗಿ ಮೃತಪಟ್ಟ ಚಂದ್ರಶೇಖರ್ ಅವರು ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೇ ಕಾರಣಕ್ಕೆ ಕೌಟುಂಬಿಕ ಕಲಹವೂ ಏರ್ಪಟ್ಟಿತ್ತು ಎಂಬುದು ತಿಳಿದು ಬಂದಿದೆ.
‘ರಾಜಕೀಯವಾಗಿ ಮಹತ್ವಕಾಂಕ್ಷಿಯಾಗಿದ್ದ ಸಂಕೋಳ್, ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದರು. ಉದ್ಯಮದಲ್ಲಿ ಉಂಟಾದ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸ್ಥಿರಾಸ್ತಿ ಮಾರಾಟ ಮಾಡಿ ಸಾಲದಿಂದ ಮುಕ್ತಿ ಪಡೆಯಬೇಕು ಎಂಬುದು ಸಂಬಂಧಿಕರ ಸಲಹೆಯಾಗಿತ್ತು. ಈ ವಿಚಾರವಾಗಿ ಕುಟುಂಬದಲ್ಲಿ ಕಲಹ ಸೃಷ್ಟಿಯಾಗಿತ್ತು’ ಎಂದು ಪೊಲೀಸ್ ಇಲಾಖೆಯ ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.