ಚನ್ನಗಿರಿ: ‘ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ ಅರಿವು ಹಾಗೂ ಡಿಜಿಟಲ್ ಸಾಕ್ಷರತಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಅವು ಜ್ಞಾನ ದಾಸೋಹದ ಕೇಂದ್ರಗಳಾಗಿವೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಿ.ಕೆ. ಉತ್ತಮ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಂಥಾಲಯ ಮೇಲ್ವಿಚಾರಕರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿರುವ ಎಲ್ಲ ಅರಿವು ಕೇಂದ್ರಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಅನೇಕ ಗ್ರಂಥಾಲಗಳಿಗೆ ಕಂಪ್ಯೂಟರ್, ಯುಪಿಎಸ್, ಪೀಠೋಪಕರಣ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ನೀಟ್ ಮತ್ತು ಸಿಇಟಿ ಪುಸ್ತಕಗಳನ್ನು ಒದಗಿಸಲಾಗುವುದು ಎಂದರು.
ಅರಿವು ಕೇಂದ್ರಗಳಲ್ಲಿ ಸಂಜೀವಿನಿ ಸಂಘಗಳ ಮಹಿಳೆಯರಿಗೆ ಕಲಿಸುವುದರ ಮೂಲಕ ಅವರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಬೇಕು ಎಂದು ಜಿಲ್ಲಾ ಶಿಕ್ಷಣ ಫೌಂಡೇಶನ್ ಸಂಯೋಜಕ ಮಹಾಂತೇಶ್ ಹೇಳಿದರು.
ಗ್ರಂಥಾಲಯ ನಿರ್ವಹಣಾಧಿಕಾರಿ ರಾಜಪ್ಪ, ಸಹಾಯಕ ಅಧಿಕಾರಿ ಹನುಮಂತಪ್ಪ, ಗ್ರಂಥಾಲಯ ಮೇಲ್ವಿಚಾರಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್. ರೇವಣ್ಣ, ಜಿಲ್ಲಾ ಕಾರ್ಯದರ್ಶಿ ಎಚ್.ಎಸ್. ರವಿಕುಮಾರ್, ದಯಾನಂದ್, ಸುಜಾತಾ, ಕನಕ, ಸತೀಶ್, ಮೌನೇಶ್ ಹಾಗೂ ನಾಗರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.