ADVERTISEMENT

ಚನ್ನಗಿರಿ | ಪುರಸಭೆಯಲ್ಲಿ ಅಧಿಕಾರಿಗಳ ದರ್ಬಾರ್: ಆರೋಪ

ಚನ್ನಗಿರಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:29 IST
Last Updated 5 ನವೆಂಬರ್ 2025, 7:29 IST
ಚನ್ನಗಿರಿಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಿ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು
ಚನ್ನಗಿರಿಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಿ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು   

ಚನ್ನಗಿರಿ: ‘ಪುರಸಭೆಗೆ ಸೇರಿದ ಟ್ರ್ಯಾಕ್ಟರ್‌ಗಳು ಗೆದ್ದಲು ಹಿಡಿದಿವೆ. ಉಳಿದವುಗಳಿಗೆ ಡೀಸೆಲ್‌ ಹಾಕಿಸಿ ಬೇಕಾಬಿಟ್ಟಿ ಬಿಲ್ ಮಾಡಲಾಗುತ್ತಿದೆ. ಹಾಳಾದ ವಾಹನಗಳನ್ನು ಹರಾಜು ಮಾಡಿದರೆ ಪುರಸಭೆಗೆ ಒಂದಿಷ್ಟು ಆದಾಯವಾದರೂ ಬರುತ್ತದೆ’ ಎಂದು ಸದಸ್ಯರಾದ ಅಮೀರ್ ಅಹಮದ್, ಪಟ್ಲಿ ನಾಗರಾಜ್ ಒತ್ತಾಯಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ನೂರಾರು ಸಮಸ್ಯೆಗಳಿದ್ದರೂ, ಭೂ ಪರಿವರ್ತನೆಗಾಗಿ ನಿರಾಕ್ಷೇಪಣ ಪತ್ರ ನೀಡುವ ಬಗ್ಗೆ ಸಭೆಯ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಇದೊಂದೇ ವಿಷಯದ ಮೇಲೆ ಚರ್ಚೆ ನಡೆಸುವುದು ಬೇಡ ಎಂದು ಸದಸ್ಯರಾದ ನಂಜುಂಡಪ್ಪ, ಚಿಕ್ಕಣ್ಣ, ಪರಮೇಶ್ ಪಾರಿ, ಸೈಯದ್ ಗೌಸ್ ಪೀರ್ ಹೇಳಿದರು. 

ADVERTISEMENT

‘ಪುರಸಭೆಯಲ್ಲಿ ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ. ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರಿಗೆ ಕನಿಷ್ಠ ಗೌರವವನ್ನು ಕೊಡದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲದಂತಾಗಿದೆ’  ಎಂದು ಸದಸ್ಯ ಎಂ.ಬಿ. ಶಿವಾಜಿರಾವ್ ದೂರಿದರು.

ಸಭೆ ವಿಳಂಬ: ಸಭೆಯ ಕಾರ್ಯಸೂಚಿಯ ಪ್ರತಿಯನ್ನು ಐದು ದಿನದ ಮೊದಲಷ್ಟೇ ನೀಡಲಾಗಿದೆ. ಸದಸ್ಯರ ವಾರ್ಡ್‌ಗಳ ಕುಂದು ಕೊರತೆಗಳನ್ನು ಚರ್ಚಿಸುವ ಬಗ್ಗೆ ಕಾರ್ಯಸೂಚಿಯಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿ 16 ಸದಸ್ಯರು ಅಧ್ಯಕ್ಷರಿಗೆ ಮನವಿ ಪತ್ರ ನೀಡಿದ್ದರು. ಆದರೂ ನಿಗದಿಯಂತೆ ಸಭೆ ನಡೆಸಲು ಮುಂದಾಗಿದ್ದನ್ನು ಖಂಡಿಸಿ ಸಭೆಗೆ ಹಾಜರಾಗದಿರಲು ಅವರು ನಿರ್ಧರಿಸಿದರು. ಅವರ ಮನವೊಲಿಸಲು ಎರಡು ಗಂಟೆ ಹಿಡಿಯಿತು. ಹೀಗಾಗಿ ಬೆಳಿಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 1 ಗಂಟೆಗೆ ಶುರುವಾಯಿತು.

ಉಪಾಧ್ಯಕ್ಷೆ ಸರ್ವಮಂಗಳಮ್ಮ, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.