
ದಾವಣಗೆರೆ: ಬಾಲ್ಯವಿವಾಹ ಪ್ರಕರಣಗಳಲ್ಲಿ ಮದುವೆ ಮಾಡಿಸುವ ಪುರೋಹಿತರು, ಪಾಲಕರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಬಾಲ್ಯವಿವಾಹ, ಪೋಕ್ಸೊ ಹಾಗೂ ಬಾಲಕಾರ್ಮಿಕರ ಮೇಲೆ ನಿಗಾ ಇಡಬೇಕು. ಈ ಕುರಿತು ಇನ್ನಷ್ಟು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
‘ಶಾಲೆಗೆ ಬಾರದೇ ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕಲೆಹಾಕಬೇಕು. ಯಾವ ಕಾರಣಕ್ಕಾಗಿ ಶಾಲೆಯನ್ನು ತೊರದಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು’ ಎಂದು ತಾಕೀತು ಮಾಡಿದರು.
‘ದತ್ತು ಕೇಂದ್ರದಲ್ಲಿ ದಾಖಲಾಗಿ 60 ದಿನಗಳು ಪೂರ್ಣಗೊಂಡ ನಂತರ ದತ್ತು ಮಾರ್ಗಸೂಚಿ ನಿಯಮಾನುಸಾರ ಕ್ರಮವಹಿಸಲಾಗುತ್ತದೆ. ಈವರೆಗೆ 75 ಮಕ್ಕಳನ್ನು ವಿಶೇಷ ದತ್ತು ಸಂಸ್ಥೆ ಅಮೂಲ್ಯ ಕೇಂದ್ರದಿಂದ ದತ್ತು ನೀಡಲಾಗಿದೆ. ಬಾಲನ್ಯಾಯ ಕಾಯ್ದೆಯಡಿ ಜಿಲ್ಲೆಯಲ್ಲಿ 11 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿವೆ. 2 ದತ್ತು ಕೇಂದ್ರಗಳಲ್ಲಿ 29 ಮಕ್ಕಳು ಇದ್ದಾರೆ’ ಎಂದು ಮಕ್ಕಳ ರಕ್ಷಣಾ ಘಟಕದ ಕವಿತಾ ಸಭೆಗೆ ಮಾಹಿತಿ ನೀಡಿದರು.
‘ಭಿಕ್ಷಾಟನೆ ತಡೆಯಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಸಹಾಯವಾಣಿ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಈವರೆಗೆ 9 ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ವಿವರಿಸಿದರು
ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಜರಿದ್ದರು.
ಬಾಲಕಾರ್ಮಿಕರು: ನಿಗಾಕ್ಕೆ ಸೂಚನೆ
ಬಾಲಕಾರ್ಮಿಕರನ್ನು ಪತ್ತೆ ಮಾಡಿ ಪಾಲಕರ ವಶಕ್ಕೆ ಒಪ್ಪಿಸಿದ ಬಳಿಕವೂ ನಿಗಾವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಸೂಚಿಸಿದರು. ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಪಾಲಕರ ವಶಕ್ಕೆ ನೀಡಿದ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕಿ ನಿಗಾವಹಿಸಬೇಕು. ಬಡತನ ಕೌಟುಂಬಿಕ ಪರಿಸ್ಥಿತಿಯು ಅವರನ್ನು ಮತ್ತೆ ಬಾಲಕಾರ್ಮಿಕರನ್ನಾಗಿ ಮಾಡಬಹುದು’ ಎಂದು ಹೇಳಿದರು. ‘ಜಿಲ್ಲೆಯಲ್ಲಿ 16 ಬಾಲಕಾರ್ಮಿಕ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಆ ಬಾಲಕಾರ್ಮಿಕರು ಶಾಲೆಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ವಿಸ್ತೃತ ವರದಿ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.