
ಮಾಯಕೊಂಡ: ಒಂದು ಎಕರೆ ಜಮೀನಿನಲ್ಲಿ, ಮೂರು ವರ್ಷದ ಅಡಿಕೆ ಗಿಡಗಳ ನಡುವೆ ನಳನಳಿಸುತ್ತಿರುವ ದೊಣ್ಣೆ ಮೆಣಸಿನಕಾಯಿ (ಹೊಟ್ಟೆ ಮೆಣಸಿನಕಾಯಿ) ಬೆಳೆದಿರುವ ಇಲ್ಲಿನ ಪ್ರಗತಿಪರ ರೈತ ಎಸ್.ಎನ್. ರಾಮಸ್ವಾಮಿ ಅಂತರಬೆಳೆ ಬೆಲೆದು ಲಕ್ಷ ರೂಪಾಯಿ ಆದಾಯ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿವಿಧ ತಳಿಗಳ ಸಸಿ ಸಿದ್ಧಪಡಿಸಿ ಮಾರಾಟ ಮಾಡುವ ನರ್ಸರಿ ಮಾಲೀಕರೂ ಆಗಿರುವ ರಾಮಸ್ವಾಮಿ, ತರಕಾರಿ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಅಡಿಕೆ ಗಿಡಗಳು ದೊಡ್ಡದಾಗುತ್ತಿದ್ದರೂ, ಅವುಗಳ ನಡುವೆಯೇ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಈಗಾಗಲೇ ಆರು ಬಾರಿ ಕಟಾವು ಮಾಡಲಾಗಿದ್ದು, ಅಂದಾಜು 20 ಕ್ವಿಂಟಲ್ ಇಳುವರಿ ಬಂದಿದೆ. ಆರಂಭದಲ್ಲಿ ಪ್ರತಿ ಕೆ.ಜಿ. ಮೆಣಸಿನಕಾಯಿಗೆ ₹ 60 ಇದ್ದ ದರ ನಂತರ ₹ 80ಕ್ಕೆ ಜಿಗಿಯಿತು. ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಟ್ಟೆ ಮೆಣಸಿನಕಾಯಿ ₹ 100ರ ಗಡಿಯಲ್ಲಿದ್ದು, ಈವರೆಗೆ ₹ 1.30 ಲಕ್ಷ ಆದಾಯ ಲಭಿಸಿದೆ ಎಂದು ಅವರು ಹೇಳುತ್ತಾರೆ.
6ನೇ ಬಾರಿ ಕಟಾವು ಮುಗಿದ ನಂತರವೂ ಬೆಳೆ ನಳನಳಿಸುತ್ತಿದ್ದು, ಗಿಡಗಳು ಉತ್ತಮವಾಗಿ ಹೂ ಮತ್ತು ಕಾಯಿ ಕಟ್ಟುತ್ತಿವೆ. ಒಟ್ಟಾರೆ 50ರಿಂದ 60 ಕ್ವಿಂಟಲ್ ಫಸಲು ಸಿಗುವ ನಿರೀಕ್ಷೆಯಿದೆ. ಮುಂದೆಯೂ ಇದೇ ದರ ಸಿಕ್ಕರೆ ₹ 3 ಲಕ್ಷದಿಂದ ₹ 4 ಲಕ್ಷ ಆದಾಯ ದೊರೆಯುವ ಸಾಧ್ಯತೆ ಇದೆ ಎಂಬ ವಿಶ್ವಾಸ ಅವರದ್ದು.
ಹೆಚ್ಚು ಜಮೀನಿದ್ದರೆ ಮಾತ್ರ ಹೆಚ್ಚು ಲಾಭ ಎಂದೇನಿಲ್ಲ. ಉತ್ತಮ ತಳಿ ತಾಂತ್ರಿಕತೆ ತಜ್ಞರ ಸಲಹೆ ಕಾಳಜಿ ಮಾಡಿದರೆ ಉತ್ತಮ ಇಳುವರಿ ಜೊತೆ ಉತ್ತಮ ಆದಾಯ ಗಳಿಸಬಹುದುರಾಮಸ್ವಾಮಿ ಪ್ರಗತಿಪರ ರೈತ ನರ್ಸರಿ ಮಾಲೀಕ
ರಾಮಸ್ವಾಮಿ ಅವರು ನಮ್ಮ ಭಾಗದಲ್ಲಿ ಹೊಟ್ಟೆ ಮೆಣಸಿನಕಾಯಿ ಬೆಳೆಯನ್ನು ಉತ್ತಮವಾಗಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆಧನಂಜಯ್ ಯುವ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.