ದಾವಣಗೆರೆ: ‘ನಾಡು ಕಂಡ ಒಬ್ಬ ಪ್ರಬುದ್ಧ ಅಭಿನೇತ್ರಿಯಾಗಿದ್ದ ಚಿಂದೋಡಿ ಲೀಲಾ, ನಾಟಕ ಕಲೆ ಮೂಲಕ ಕನ್ನಡ ನುಡಿ ಸೇವೆ ಮಾಡಿದ್ದಾರೆ’ ಎಂದು ಹಿರಿಯ ಪತ್ರಕರ್ತ ಐರಣಿ ಬಸವರಾಜ ಅಭಿಪ್ರಾಯಪಟ್ಟರು.
ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶುಕ್ರವಾರ ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಚಿಂದೋಡಿ ಲೀಲಾ ಅವರ 12ನೇ ವರ್ಷದ ರಂಗಸ್ಮರಣೆ ಹಾಗೂ ರಂಗಭೂಮಿ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚಿಂದೋಡಿ ಲೀಲಾ ಅವರು ದಾವಣಗೆರೆಯ ಸಾಮಾಜಿಕ, ಧಾರ್ಮಿಕ ಹಾಗೂ ಕಲಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಲ್ಲಿನ ಸೋಮೇಶ್ವರ ದೇವಾಲಯ, ಕಲಾಕ್ಷೇತ್ರ ಹಾಗೂ ಶಂಕರ ಲೀಲಾ ಕಲ್ಯಾಣ ಮಂಟಪಗಳು ಅವರ ಕೊಡುಗೆಗಳು. ಇದರೊಂದಿಗೆ ಸಾವಿರಾರು ಕಲಾವಿದರಿಗೆ ಅವರು ಪ್ರೇರಣೆಯಾಗಿದ್ದಾರೆ’ ಎಂದರು.
‘ಚಿಂದೋಡಿ ಲೀಲಾ ಅವರು ಮರಾಠಿಗರ ಪ್ರಾಬಲ್ಯವಿರುವ ಬೆಳಗಾವಿಯ ಗಡಿ ಭಾಗದ ಊರುಗಳಲ್ಲಿ ಯಶಸ್ವಿಯಾಗಿ ನಾಟಕ ಪ್ರದರ್ಶನ ನಡೆಸುವ ಮೂಲಕ ಎಂಇಎಸ್ ಪುಂಡರ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಿದ ದಿಟ್ಟ ಕನ್ನಡತಿ. ಎಂಇಎಸ್ ಬೆದರಿಕೆಗೆ ಜಗ್ಗದೆ, ನಾಟಕ ಪ್ರದರ್ಶಿಸುವ ಜತೆಗೆ ಬೆಳಗಾವಿಯಲ್ಲಿ ರಂಗ ಮಂದಿರ ನಿರ್ಮಿಸಿದ ಲೀಲಾ ಅವರನ್ನು ಜನ ಅಭಿನವ ಕಿತ್ತೂರು ಚೆನ್ನಮ್ಮ ಎಂದು ಕರೆದಿದ್ದರು’ ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ‘ವೃತ್ತಿ ರಂಗಭೂಮಿ ಕಲಾವಿದರು ಇಂದು ಸಂಕಷ್ಟದಲ್ಲಿದ್ದಾರೆ. ನಗರದಕ್ಕೆ ಬಂದು, ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ವೃತ್ತಿ ರಂಗಭೂಮಿ ಕಚೇರಿ ತೆರೆದ ಬಳಿಕ ಕಲಾವಿದರ ಕಷ್ಟಗಳು ಅರಿವಿಗೆ ಬರುತ್ತಿವೆ. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು, ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕರ್ನಾಟಕದಲ್ಲಿ ನಾಟಕ ಕಂಪನಿ ಎಂದರೆ ಗುಬ್ಬಿ ವೀರಣ್ಣನವರ ಕಂಪನಿಯ ಹೆಸರೇ ಕೇಳಿಬರುತ್ತದೆ. ಆದರೆ ನಮ್ಮ ದಾವಣಗೆರೆಯಲ್ಲೇ ಹುಟ್ಟಿ ಬೆಳೆದಿರುವ ಕೆಬಿಆರ್ ನಾಟಕ ಕಂಪನಿ, ಗುಬ್ಬಿ ಕಂಪನಿಗೆ ಯಾವುದರಲ್ಲೂ ಕಡಿಮೆ ಇಲ್ಲ. ಅಷ್ಟೊಂದು ಭವ್ಯ ಇತಿಹಾಸ ನಗರದ ರಂಗಭೂಮಿಗೆ ಇದೆ. ಈ ಭವ್ಯತೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆಯು ವೃತ್ತಿ ರಂಗಭೂಮಿ ಕಲಾವಿದರಿಗೆ ಸಹಕಾರ ನೀಡಲಿದೆ’ ಎಂದರು.
ಸಮಾರಂಭದಲ್ಲಿ ರಂಗ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಕುಮಾರ ನಾಟಕ ಸಂಘದ ಕಲಾವಿದರಿಂದ ‘ನಕ್ಕೀತು ಅರಮನೆ, ಸಿಕ್ಕೀತು ಸೆರೆಮನೆ’ ನಾಟಕ ಪ್ರದರ್ಶನ ನಡೆಯಿತು.
ಶ್ರೀ ಕುಮಾರ ನಾಟಕ ಸಂಘದ ಮಾಲೀಕ ಜಾಲ್ಯಾಳ ಮಂಜುನಾಥ್, ಹಿರಿಯ ಕಲಾವಿದ, ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್, ಚಿಂದೋಡಿ ಮಧುಕೇಶ್, ಚಿಂದೋಡಿ ವೀರಶಂಕರ್, ಚಿಂದೋಡಿ ಎಲ್ ಚಂದ್ರಧರ, ಜ್ಞಾನೇಶ್ವರ ಜವಳಿ, ಚಿಂದೋಡಿ ಜಯಪ್ರಕಾಶ್ ಅವರೂ ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.