ADVERTISEMENT

ಕಾಲೇಜು ಪುನರಾರಂಭ; ವಿದ್ಯಾರ್ಥಿಗಳಲ್ಲಿ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 15:33 IST
Last Updated 26 ಜುಲೈ 2021, 15:33 IST
ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜು ಪುನರಾರಂಭದ ಮೊದಲ ದಿನವಾದ ಸೋಮವಾರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು
ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜು ಪುನರಾರಂಭದ ಮೊದಲ ದಿನವಾದ ಸೋಮವಾರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು   

ಹುಬ್ಬಳ್ಳಿ: ಕೋವಿಡ್ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕಾಲೇಜುಗಳು ಸೋಮವಾರ ಪುನರಾರಂಭವಾದವು. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಂಡುಬಂತು.ಬಹುದಿನಗಳ ಬಳಿಕ ಸಹಪಾಠಿಗಳನ್ನು ಭೇಟಿಯಾದ ಸಂಭ್ರಮ ಆವರಿಸಿತ್ತು.

ಮೂರುಸಾವಿರ ಮಠದ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ, ಮಹಿಳಾ ವಿದ್ಯಾಪೀಠ, ಕೆಎಲ್‌ಇ ಕಾಲೇಜು, ಚೇತನಾ ಕಾಲೇಜು, ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಕಂಡುಬಂತು.

ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಬಹುತೇಕರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದವರೇ ಆಗಿದ್ದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಕೆಲ ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ADVERTISEMENT

‘ಮಾರ್ಚ್ 27ರಂದು ಲಾಕ್‌ಡೌನ್ ಆದಾಗ ಬಂದ್ ಆಗಿದ್ದ ಕಾಲೇಜು, ಮೂರು ತಿಂಗಳ ಬಳಿಕ ತೆರೆದಿದೆ. ಮೊದಲ ದಿನವಾದ್ದರಿಂದ ಶೇ 50ರಷ್ಟು ವಿದ್ಯಾರ್ಥಿಗಳು ಹಾಜರಾತಿ ಇತ್ತು. ಕೋವಿಡ್ ಮೊದಲ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಇದ್ದಿದ್ದರಿಂದ, ಲಸಿಕೆ ಪಡೆದವರೇ ಬಂದಿದ್ದರು’ ಎಂದು ವಿದ್ಯಾನಗರದಮಹಿಳಾ ವಿದ್ಯಾಪೀಠ ಪದವಿ ಮಹಾವಿದ್ಯಾಲಯದಪ್ರಾಂಶಪಾಲರಾದ ಡಾ.ಡಿ.ಪಿ. ಮಣಿಕಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪರೀಕ್ಷೆಗೆ ತಯಾರಿ:

‘ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ಹಾಗಾಗಿ, ಇದುವರೆಗೆ ವಿದ್ಯಾರ್ಥಿಗಳಿಗೆ ನಡೆಯುತ್ತಿದ್ದ ಆನ್‌ಲೈನ್‌ ತರಗತಿಯ ಮುಂದುವರಿದ ಭಾಗವಾಗಿ ಆಫ್‌ಲೈನ್ ತರಗತಿಗಳನ್ನು ನಡೆಸಿದೆವು. ಪಾಠಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸಿ ಪರೀಕ್ಷೆಗೆ ‌ಅಣಿಗೊಳಿಸುತ್ತಿದ್ದೇವೆ’ ಎಂದರು.

‘ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ತರಗತಿಗಳನ್ನು ನಡೆಸಲಾಯಿತು. ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿದ್ದಾರೆ’ ಎಂದುಜೆ.ಸಿ. ನಗರದಲ್ಲಿರುವ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ ಡಾ. ಲಿಂಗರಾಜ ಅಂಗಡಿ ಹೇಳಿದರು.

ಪ್ರವೇಶ ಪ್ರಕ್ರಿಯೆ ಆರಂಭ:

ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯೂ ಆರಂಭವಾಗಿದೆ. ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದ ಹಾಗೂ ಕೆಲವರು ಪ್ರವೇಶ ಪ್ರಕ್ರಿಯೆ ಮುಗಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.