ADVERTISEMENT

ಹಿಂದೂ–ಮುಸ್ಲಿಂ ಸಾಮರಸ್ಯ: ರೈತ ಮುಖಂಡ ನೀಡಿದ್ದ ಜಾಗದಲ್ಲಿ ಮಸೀದಿ

ಹಿಂದೂ–ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿ ದಾವಣಗೆರೆ ತಾಲ್ಲೂಕಿನ ಬಲ್ಲೂರು ಗ್ರಾಮ

ಅನಿತಾ ಎಚ್.
Published 3 ಮೇ 2022, 19:31 IST
Last Updated 3 ಮೇ 2022, 19:31 IST
ದಾವಣಗೆರೆ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ ಮಸೀದಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು.
ದಾವಣಗೆರೆ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ ಮಸೀದಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು.   

ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಅವರು ತಮ್ಮ ಗ್ರಾಮದ ಮುಸ್ಲಿಂ ಸಮುದಾಯದವರಿಗೆ ನೀಡಿದ್ದ 40X40 ಅಡಿ ಜಾಗದಲ್ಲಿ ಈಗ ಮಸೀದಿ ತಲೆ ಎತ್ತುತ್ತಿದೆ.

ದಾವಣಗೆರೆ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ 8 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಸಮುದಾಯದ ಧಾರ್ಮಿಕ ಚಟುವಟಿಕೆಗೆ ಸೂಕ್ತ ಸ್ಥಳ ಇರಲಿಲ್ಲ. ಮೊಹರಂ ಆಚರಣೆಯನ್ನು ರಸ್ತೆಯಲ್ಲಿಯೇ ಮಾಡಬೇಕಾದ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಬಲ್ಲೂರು ರವಿಕುಮಾರ್‌ ತಮ್ಮ ತಾತನವರಿಂದ ಬಂದಿದ್ದ ಭೂಮಿಯಲ್ಲಿ 40X40 ಅಡಿ ಜಾಗವನ್ನು 1990ರ ದಶಕದಲ್ಲಿಯೇ ಜಾಮಿಯಾ ಮಸೀದಿ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದರು. ಮಸೀದಿ ನಿರ್ಮಾಣ ಕಾರ್ಯ ಆಗ ಆರಂಭಗೊಂಡಿತ್ತಾದರೂ ಹಣಕಾಸಿನ ತೊಂದರೆಯಿಂದಾಗಿ ಅರ್ಧಕ್ಕೇ ನಿಂತಿತ್ತು. ಈಗ ಆರು ತಿಂಗಳುಗಳಿಂದ ಕೆಲಸ ಚುರುಕು ಪಡೆದುಕೊಂಡಿದ್ದು, ಸಣ್ಣ–ಪುಟ್ಟ ಕೆಲಸಗಳನ್ನು ಹೊರತುಪಡಿಸಿ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.

ಮುಸ್ಲಿಂ ಸಮುದಾಯದ ಎಲ್ಲ ಕುಟುಂಬಗಳು ಸಣ್ಣ ರೈತರಾಗಿದ್ದು, ಜೀವನೋಪಾಯಕ್ಕಾಗಿ ಮೀನುಗಾರಿಕೆ ನೆಚ್ಚಿಕೊಂಡಿದ್ದಾರೆ. ವಕ್ಫ್‌ ಬೋರ್ಡ್‌ನಿಂದ ಮಸೀದಿ ನಿರ್ಮಾಣಕ್ಕೆ ₹ 3 ಲಕ್ಷ ಅನುದಾನ ಸಿಕ್ಕಿತ್ತು. ಗ್ರಾಮಸ್ಥರೂ ದೇಣಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಕುಟುಂಬಗಳೂ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ.

ADVERTISEMENT

‘ಗ್ರಾಮದ ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ಚಟುವಟಿಕೆಗಳ ಸಾಮಗ್ರಿಗಳನ್ನು ಇಲ್ಲಿನ ದೇವಸ್ಥಾನದಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾವಣಗೆರೆಯಲ್ಲಿ 1990ರ ದಶಕದಲ್ಲಿ ಕೋಮು ಗಲಭೆ ನಡೆದ ಸಂದರ್ಭದಲ್ಲಿ ಕೆಲವರು ಅವರ ಸಾಮಗ್ರಿಗಳನ್ನು ತೆಗೆದು ಹೊರಗೆ ಹಾಕಿದ್ದರು.

ಆಗ ಅವರು ನನ್ನ ಬಳಿ ಬಂದು ಕುಳಿತರು. ಅವರಿಗೆ ಧೈರ್ಯ ತುಂಬಿ, ಧಾರ್ಮಿಕ ಚಟುವಟಿಕೆಗೆ ಸಹಾಯವಾಗಲಿ ಎಂದು ಜಾಗ ನೀಡಿದ್ದೆ. ಗ್ರಾಮದ ದಕ್ಷಿಣಕ್ಕೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಉತ್ತರಕ್ಕೆ ಆಂಜನೇಯಸ್ವಾಮಿ ದೇವಸ್ಥಾನ, ಪಶ್ಚಿಮಕ್ಕೆ ಮಸೀದಿ ಇದೆ. ಗ್ರಾಮದಲ್ಲಿ ಯಾವುದೇ ಆಚರಣೆಗಳು ನಡೆದರೂ ಪರಸ್ಪರ ಭಾಗಿಯಾಗುತ್ತೇವೆ’ ಎನ್ನುತ್ತಾರೆ ಬಲ್ಲೂರು ರವಿಕುಮಾರ್‌.

‘ಜಾಮಿಯಾ ಮಸೀದಿ ಮುಂಭಾಗದಲ್ಲಿ ನಮ್ಮ ತಾತ ಬಿ.ಎಂ. ಚನ್ನಯ್ಯ ಅವರ ಹೆಸರಿನ ಫಲಕವನ್ನು ಗೋಡೆಯೊಳಗೆ ಕೂರಿಸುವ ಮೂಲಕ ಸಮುದಾಯದವರು ಕೃತಜ್ಞತೆ ತೋರಿದ್ದಾರೆ. ದೇಶದ ಬೆಳವಣಿಗೆಗಳಿಗೆ ಕಿವಿಗೊಡದೆ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.