ADVERTISEMENT

ಸಿದ್ಧಗಂಗಾದಿಂದ ₹ 5 ಲಕ್ಷ ಮೌಲ್ಯದ ಕಾನ್ಸಂಟ್ರೇಟರ್‌ ಕೊಡುಗೆ

ಸಮಾಜ ಸೇವೆಯಲ್ಲಿ ಸಂಸ್ಥೆ ಸದಾ ಮುಂದು: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 4:40 IST
Last Updated 7 ಜೂನ್ 2021, 4:40 IST
ದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯಿಂದ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ವೀಕರಿಸಿದರು.
ದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯಿಂದ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ವೀಕರಿಸಿದರು.   

ದಾವಣಗೆರೆ: ಸಿದ್ಧಗಂಗಾ ವಿದ್ಯಾಸಂಸ್ಥೆ ಸದಾ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ಭೂಕಂಪ, ಅತಿವೃಷ್ಟಿ ಸಂದರ್ಭದಲ್ಲಿ ದೇಣಿಗೆ, ಕಳೆದ ವರ್ಷ ಆಹಾರದ ಕಿಟ್‌ ವಿತರಣೆ ಮಾಡಿದ್ದರು. ಈ ಬಾರಿ ಮನುಷ್ಯನಿಗೆ ಅತಿ ಅಗತ್ಯ ಇರುವ ಆಮ್ಲಜನಕ ಒದಗಿಸುವ ಸಾಂದ್ರಕಗಳನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಸುಮಾರು ₹ 5 ಲಕ್ಷ ಮೌಲ್ಯದ ಹತ್ತು ಕಾನ್ಸಂಟ್ರೆಟರ್‌ಗಳನ್ನು ಟೇಪ್ ಕತ್ತರಿಸುವ ಮೂಲಕ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆಯ ಇತಿಹಾಸದಲ್ಲಿ ಈ ಸತ್ಕಾರ್ಯ ಶಾಶ್ವತವಾಗಿ ದಾಖಲಾಗುವುದು ಎಂದು ಹೇಳಿದರು.

ADVERTISEMENT

ಮೇಯರ್‌ ಎಸ್.ಟಿ. ವೀರೇಶ್‍, ‘ಸಂಕಷ್ಟ ಉಂಟಾದಾಗ ಸದಾ ಕೈಜೋಡಿಸುವ ಸಿದ್ಧಗಂಗಾ ವಿದ್ಯಾಸಂಸ್ಥೆ ಸೇವಾಕಾರ್ಯ ಸ್ಮರಣೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕ ಡಾ. ಜಯಂತ್‍ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೋವಿಡ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಉಸಿರಾಟದ ತೊಂದರೆ ಉಂಟಾಗುತ್ತದೆ. ಆಕ್ಸಿಮೀಟರ್‌ನಲ್ಲಿ 90ಕ್ಕಿಂತ ಕಡಿಮೆ ಪ್ರಮಾಣ ತೋರಿಸುತ್ತದೆ. ಆಗ ತಕ್ಷಣ ಆಮ್ಲಜನಕ ಪೂರೈಕೆಯಾಗಬೇಕು. ಅಂತಹ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳು ಜೀವರಕ್ಷಕವಾಗಿರುತ್ತದೆ’ ಎಂದು ವಿವರಿಸಿದರು.

‘ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳಿಗೆ ವೈದ್ಯರು ಆಮ್ಲಜನಕ ಪೂರೈಕೆ ಅವಶ್ಯಕತೆ ಇದೆ ಎಂದು ಮನಗಂಡು ರೋಗಿಯ ವಿವರ ಬರೆದು ಪತ್ರಕೊಟ್ಟರೆ ಅಂತಹ ರೋಗಿಗಳಿಗೆ ಉಚಿತವಾಗಿ ಸಿದ್ಧಗಂಗಾ ಸಂಸ್ಥೆಯಿಂದ ಈ ಯಂತ್ರ ಕೊಡಲಾಗುತ್ತದೆ. ಅವರ ಅವಶ್ಯಕತೆ ಮುಗಿದಾಗ ಸುಸ್ಥಿತಿಯಲ್ಲಿ ಹಿಂತಿರುಗಿಸಿದರೆ ಬೇರೆಯವರಿಗೆ ಕೊಡಲು ಅನುಕೂಲವಾಗುತ್ತದೆ. ಇದು ಸಿದ್ಧಗಂಗಾ ಸಂಸ್ಥೆಯಿಂದ ಒಂದು ಅಳಿಲು ಸೇವೆ’ ಎಂದರು.

ಸಂಸ್ಥೆಯ ಕರೆಗೆ ಓಗೊಟ್ಟು ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಕೇವಲ ಮೂರುದಿನಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ಮುಖ್ಯಸ್ಥೆ ಜಸ್ಟಿನ್ ಡಿಸೋಜ, ವಿದ್ಯಾರ್ಥಿಗಳಾದ ಸಾಮ್ರಾಟ್, ರಾಮಮನೋಹರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.