ADVERTISEMENT

ಧರ್ಮಾಧಾರಿತ ಸಂವಿಧಾನವನ್ನು ಖಂಡಿಸಿ: ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:46 IST
Last Updated 26 ಜನವರಿ 2020, 14:46 IST
ದಾವಣಗೆರೆಯ ಸಿಪಿಐ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಸಂವಿಧಾನ ರಕ್ಷಣೆ ನಮ್ಮೇಲ್ಲರ ಹೊಣೆ’ ವಿಚಾರಸಂಕಿಣವನ್ನು ಸಿಪಿಐ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಉದ್ಘಾಟಿಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಎಲ್.ಎಚ್. ಅರುಣಕುಮಾರ್, ಅವರಗೆರೆ ಉಮೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸಿಪಿಐ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಸಂವಿಧಾನ ರಕ್ಷಣೆ ನಮ್ಮೇಲ್ಲರ ಹೊಣೆ’ ವಿಚಾರಸಂಕಿಣವನ್ನು ಸಿಪಿಐ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಉದ್ಘಾಟಿಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಎಲ್.ಎಚ್. ಅರುಣಕುಮಾರ್, ಅವರಗೆರೆ ಉಮೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಹಲವು, ಸಂಸ್ಕೃತಿ, ಜಾತಿ, ಭಾಷೆ, ಧರ್ಮಗಳೂ ಸೇರಿ ಬಹುತ್ವದ ಮೇಲೆ ರಚಿತವಾಗಿರುವ ಭಾರತದ ಸಂವಿಧಾನವನ್ನು ಇಂದಿನ ಸರ್ಕಾರ ಧರ್ಮದ ಆಧಾರದ ಮೇಲೆ ತರಲು ಹೊರಟಿರುವುದು ಖಂಡನೀಯ ಎಂದು ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಇಲ್ಲಿನ ಪಂಪಾವತಿ ಭವನದಲ್ಲಿ ನಡೆದ ‘ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಎಲ್ಲಾ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗಳಲ್ಲಿ 76 ಸಾವಿರ ಕೋಟಿ, ಕರ್ನಾಟಕದ ಮಂಡಳಿ ಒಂದರಲ್ಲೇ ₹8,600 ಕೋಟಿ ಇದೆ. ರಾಜ್ಯಗಳಲ್ಲಿನ ಎಲ್ಲಾ ಮಂಡಳಿಗಳನ್ನು ಒಂದುಗೂಡಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಪ್ರಧಾನಿಯನ್ನು ಮಾಡುವ ಹುನ್ನಾರವಿದ್ದು, ಒಂದೇ ದೇಶ, ಒಂದೇ ಕಾನೂನು ಮಾಡಲು ಹೊರಟಿದೆ. ಇದನ್ನು ಈ ದೇಶದ ಜನರು, ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.

ADVERTISEMENT

‘ಎಲ್ಲರೂ ಸಹೋದರತ್ವ, ಏಕತೆಯಿಂದ ಬಾಳಬೇಕು ಎಂಬುದು ಅಂಬೇಡ್ಕರ್ ಸಂವಿಧಾನದ ಆಶಯ. ಗಾಂಧೀಜಿ ಸೇರಿ ಅನೇಕ ಮಹನೀಯರು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಅದನ್ನು ಉಳಿಸಿಕೊಳ್ಳದೇ ಹೋದರೆ ನಾವು ಏಕತ್ವದ ಮೇಲೆ ಬದುಕಬೇಕಾಗುತ್ತದೆ. ನಮಗೆ ಗಾಂಧೀಜಿ, ಅಂಬೇಡ್ಕರ್, ಭಗತ್‌ಸಿಂಗ್ ಅವರ ಸಂವಿಧಾನ ಬೇಕೇ ಹೊರತು ನಿಮ್ಮ ಸಂವಿಧಾನವಲ್ಲ’ ಎಂದು ಎಚ್ಚರಿಸಿದರು.

‘ಬಿಜೆಪಿ ಸರ್ಕಾರ ದೇಶದ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿಲ್ಲ. ಬದಲಾಗಿ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಸಿಎಎಯಿಂದ ಬರೀ ಮುಸ್ಲಿಮರಿಗಷ್ಟೇ ಅಪಾಯವಿಲ್ಲ. ಬದಲಾಗಿ ಗುಡ್ಡಗಾಡು ಜನರಿಗೂ ಇದರಿಂದ ತೊಂದರೆ ಇದೆ’ ಎಂದು ಪ್ರತಿಪಾದಿಸಿದರು.

ಮಸೀದಿಗಳಲ್ಲಿ ಮದ್ದುಗುಂಡು ತಯಾರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆ ಖಂಡನೀಯ. ಮಸೀದಿಯಲ್ಲಿ ಬಾಂಬ್ ಇರುವುದಿಲ್ಲ. ಬದಲಾಗಿ ಆರ್‌ಎಸ್‌ಎಸ್‌ ಮುಖಂಡರ ಜೊತೆ ಭಾವಚಿತ್ರ ತೆಗೆಸಿಕೊಂಡಿರುವ ರಾವ್ ಆದಿತ್ಯರಾವ್ ಅವರ ಬಳಿ ಇರುತ್ತದೆ ಎಂದು ಟೀಕಿಸಿದರು.

‘ಸೂರಿಗಾಗಿ ಸಮರ’ ಜಾಗೃತಿ ಜಾಥಾ ಫೆಬ್ರುವರಿ 25ರಂದು ದಾವಣಗೆರೆ ಬರಲಿದ್ದು, ಅಂದು ಎಲ್ಲರೂ ಹಾಜರಿದ್ದು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೇ ಏಪ್ರಿಲ್ 2ರಿಂದ 5ರವರೆಗೆ ಕೇರಳದಲ್ಲಿ ಅಖಿಲ ಭಾರತ ಎಐಟಿಯುಸಿ ಸಮ್ಮೇಳನ ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಮಾನವ ಹಕ್ಕುಗಳ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ‘ಸಂವಿಧಾನಕ್ಕಿಂತ ಮೊದಲು ಈ ದೇಶದ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ಬೇರೆ ದೇಶಗಳಿಂದ ಬಂದ ರಾಜರು ನಮ್ಮ ದೇಶದಲ್ಲಿ ಏಕತೆಯಿಂದ ಬಾಳ್ವೆ ಮಾಡಿದರು. ಸಂವಿಧಾನ ರಚನೆಯಾದಾಗಿನಿಂದ ಇಂದಿನವರೆಗೂ ಅದನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದೇವೆ. ಆದರೆ ಅಧಿಕಾರದಲ್ಲಿ ಇರುವವರೇ ತಿದ್ದುಪಡಿ ಮಾಡುತ್ತೇವೆ ಎಂದು ಹೊರಟಿರುವುದು ಖಂಡನೀಯ. ಆದ್ದರಿಂದ ಸಂವಿಧಾನ ರಕ್ಷಣೆ ಮಾಡಬೇಕಾದ ಅಗತ್ಯವಿದೆ’ ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕ್ವಾರಿ ಕಾರ್ಮಿಕರ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭೀಮಾರೆಡ್ಡಿ, ಸಹ ಕಾರ್ಯದರ್ಶಿ ಶಿವಕುಮಾರ್ ಡಿ.ಶೆಟ್ಟರ್, ಚನ್ನಗಿರಿ ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸೈಯದ್ ಗೌಸ್‌ ಪೀರ್ ಇದ್ದರು. ಜಿ.ಆರ್.ನಾಗರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.