ADVERTISEMENT

ಚಂದ್ರುವಿಗೆ ಶ್ರದ್ಧಾಂಜಲಿ- ರೇಣುಕಾಚಾರ್ಯಗೆ ಸಾಂತ್ವನ ಹೇಳಲು ಹೊನ್ನಾಳಿಗೆ ಸಿಎಂ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:38 IST
Last Updated 7 ನವೆಂಬರ್ 2022, 6:38 IST
   

ಹೊನ್ನಾಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಶ್ರೀರಾಮುಲು, ಆರ್. ಅಶೋಕ, ಶಾಸಕ ರಾಜೂಗೌಡ ಸೇರಿದಂತೆ ಹಲವರು ನವೆಂಬರ್ 9ರಂದು ಹೊನ್ನಾಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ
ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ನವೆಂಬರ್ 9ರಂದೇ ಚಂದ್ರುವಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಧ್ಯಮಗಳಿಗೆ ಎಫ್‍ಎಸ್‍ಎಲ್ ಕಂಟ್ರೋಲ್‌ನಲ್ಲಿರುವ ಕಾರಿನ ಪರಿಶೀಲನೆಗೆ ಬಿಟ್ಟಿದ್ದು, ನಮಗೆ ಬಿಡದಿರುವುದು ಬೇಸರ ತಂದಿದೆ. ಎಫ್‍ಎಸ್‍ಎಲ್ ವರದಿ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ನಾಳೆ ವರದಿ ಲಭ್ಯವಾಗುವ ಮಾಹಿತಿ ಇದೆ’ ಎಂದು ಹೇಳಿದರು.

ADVERTISEMENT

‘ವಿನಯ್ ಗುರೂಜಿ ಅವರ ಗೌರಿಗದ್ದೆಯಲ್ಲಿರುವ ಮಠದಲ್ಲಿನ ಸಿಸಿಟಿವಿ ಕ್ಯಾಮೆರಾ ಆನ್‌ನಲ್ಲಿದ್ದು, ಅದರ ಬ್ಯಾಕಪ್ ಇಲ್ಲ ಎಂದು ಗುರೂಜಿ ಮಂಗಳವಾರ ಹೇಳಿದ್ದರು. ಆದ್ದರಿಂದ ತಂತ್ರಜ್ಞರನ್ನು ಕರೆಸಿ ಅದರ ಮಾಹಿತಿ ಕೊಡುವುದಾಗಿ ವಿನಯ್ ಗುರೂಜಿ ಹೇಳಿದ್ದರು. ಇದೂವರೆಗೂ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಪೊಲೀಸರು ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಶಾಸಕರ ಬೆಂಬಲಿಗ ಉಮೇಶ್ ನಾಯ್ಕ ಹೇಳಿದರು.

ಶಾಸಕ ರೇಣುಕಾಚಾರ್ಯ ಅವರು ನ್ಯಾಮತಿ ತಾಲ್ಲೂಕಿನ ಟಿ. ಗೋಪಗೊಂಡನಹಳ್ಳಿ ಗ್ರಾಮದ ದೇವಸ್ಥಾನದ ಉದ್ಘಾಟನೆಗೆ ತೆರಳಿದರು. ನಂತರ ಮನೆಗೆ ಮರಳಿದ ಅವರಿಗೆ ಮತ್ತು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಕೆಲವು ಗ್ರಾಮಸ್ಥರು ತಾವು ತಂದಿದ್ದ ಅಡುಗೆಯನ್ನು ಶಾಸಕರ ಕುಟುಂಬದ ಸದಸ್ಯರಿಗೆ ಕೊಟ್ಟು ಬರುತ್ತಿದ್ದ ದೃಶ್ಯ ಕಂಡುಬಂದವು.

ಏನಾದರೂ ಮಾಹಿತಿ ಲಭ್ಯ ಇದೆಯೇ ಎನ್ನುವ ಪ್ರಶ್ನೆಗೆ ರೇಣುಕಾಚಾರ್ಯ ‘ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿ ಸಾಂತ್ವನ ಹೇಳಿದರಲ್ಲದೇ, ಸಾವಿನ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
–ಎಂ.ಪಿ.ರೇಣುಕಾಚಾರ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.