ADVERTISEMENT

ಎಸ್‌ಎಸ್‌ಎಂ ಜನುಮದಿನಕ್ಕೆ ಅಭಿನಂದನೆಗಳ ಮಹಾಪೂರ

ರಕ್ತದಾನ ಮಾಡಿ, ಕೋವಿಡ್‌ ನಿರೋಧಕ ಲಸಿಕೆ ನೀಡಿ, ಗಿಡ ನೆಟ್ಟು, ಊಟೋಪಾಹಾರ ನೀಡಿ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 4:06 IST
Last Updated 23 ಸೆಪ್ಟೆಂಬರ್ 2021, 4:06 IST
ದಾವಣಗೆರೆಯ ಐಎಮ್‌ಎ ಸಭಾಂಗಣದಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು–ಪ್ರಜಾವಾಣಿ ಚಿತ್ರ
ದಾವಣಗೆರೆಯ ಐಎಮ್‌ಎ ಸಭಾಂಗಣದಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು–ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ 54ನೇ ಜನ್ಮದಿನಕ್ಕೆ ಸಾವಿರಾರು ಮಂದಿ ಶುಭಾಶಯ ಕೋರಿದರು. ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ದಾವಣಗೆರೆಗೆ ಬಂದಿರುವ ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಶುಭ ಕೋರಿದರು. ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಎಸ್.ಎಂ.ಸಮರ್ಥ, ಸಂಬಂಧಿಗಳಾದ ಗಿರಿಜಮ್ಮ ಪರಮೇಶ್ವರಪ್ಪ, ಗಿರಿಜಾ ಉಮಾಪತಿ, ಜೆಜೆಎಂ ಕಾಲೇಜು ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ ಸೇರಿ ಅನೇಕರು ಶುಭಾಶಯ ತಿಳಿಸಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಗಣ್ಯರು, ಅಧಿಕಾರಿ ವರ್ಗ, ಅಭಿಮಾನಿಗಳು ತಂಡೋಪತಂಡವಾಗಿ ಬಂದರು.

ADVERTISEMENT

ಜೆಜೆಎಂ ವೈದ್ಯಕೀಯ ಕಾಲೇಜು ಮತ್ತು ಎಸ್.ಎಸ್.ವೈದ್ಯಕೀಯ ಕಾಲೇಜುಗಳ ವತಿಯಿಂದ ರಕ್ತದಾನ ಶಿಬಿರ, ಕೋವಿಡ್-19 ಉಚಿತ ಲಸಿಕಾ ಶಿಬಿರ ನಡೆಯಿತು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಘಟಕದಿಂದ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದಲ್ಲಿ ಹೋಳಿಗೆ ಊಟ ನೀಡಿ ಕೇಂದ್ರಕ್ಕೆ ವಿವಿಧ ವಸ್ತುಗಳನ್ನು ಮಲ್ಲಿಕಾರ್ಜುನ ಅವರಿಂದಲೇ ವಿತರಿಸಲಾಯಿತು. ಬೆಳವನೂರು ಗ್ರಾಮದಲ್ಲಿ ಜನುಮದಿನಾಚರಣೆ ಏರ್ಪಡಿಸಲಾಗಿತ್ತು.

ಕಾಂಗ್ರೆಸ್‌ ನಗರ ಘಟಕದಿಂದ ಹಾಗೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ (ರಾಂ ಅಂಡ್ ಕೋ) ಪೌರಕಾರ್ಮಿಕರಿಗೆ ಸೀರೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಮಲ್ಲಿಕಾರ್ಜುನ ನಿವಾಸದ ಬಳಿಯೂ ಅಭಿಮಾನಿಗಳು ಅನ್ನಸಂತರ್ಪಣೆಗೆ ಏರ್ಪಡಿಸಿದ್ದರು.

ರಾಜೇಂದ್ರ ಬಡಾವಣೆಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕುಂಕುಮ ಅರ್ಚನೆ ನಡೆಸಿದ ಸೇವಾದಳವು ಸಾರ್ವಜನಿಕರಿಗೆ ಮಾಸ್ಕ್‌ ಹಾಗೂ ಸ್ಯಾನಿಟೇಜರ್ ಹಂಚಿತು. ಸಸಿ ನೆಟ್ಟು ಜನುಮದಿನ ಆಚರಣೆ ಮಾಡಿತು.

ಅಸಂಘಟಿತ ಕಾರ್ಮಿಕರಿಂದ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ಹಾಗೂ ಮಾಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ವಿತರಿಸಲಾಯಿತು. ಬಸಾಪುರದಲ್ಲಿ ಕೆ.ಎಲ್. ಹರೀಶ್ ಕುಟುಂಬ ವರ್ಗದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಯಿತು.

ಸಂಜೆ ಬೂದಾಳ್ ರಸ್ತೆಯಲ್ಲಿ ಏರ್ಪಡಿಸಿದ್ದ ಮಯೂರ ಫಿಟ್‍ನೆಸ್ ಕೇಂದ್ರವನ್ನು ಮಲ್ಲಿಕಾರ್ಜುನ ಉದ್ಘಾಟಿಸಿದರು. ಬಿ. ಕಲಪನಹಳ್ಳಿ ಮತ್ತು ಭಾರತ್ ಕಾಲೊನಿ, ಶೇಖರಪ್ಪ ನಗರ ನಿವಾಸಿಗಳು ಏರ್ಪಡಿಸಿದ್ದ ಜನ್ಮದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.