ADVERTISEMENT

ಸಹಕಾರ ಬ್ಯಾಂಕ್ ಅವ್ಯವಹಾರ ತಡೆಗೆ ಕಠಿಣ ಕಾನೂನು: ಎಸ್‌.ಟಿ.ಸೋಮಶೇಖರ್

ಡಿಸಿಸಿ ಬ್ಯಾಂಕ್‌ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 5:09 IST
Last Updated 29 ಜೂನ್ 2022, 5:09 IST
ದಾವಣಗೆರೆ ಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. (ಎಡದಿಂದ ಬಲಕ್ಕೆ) ಶಾಸಕರಾದ ಎಸ್‌.ವಿ.ರಾಮಚಂದ್ರ, ಎಂ.ಪಿ.ರೇಣುಕಾಚಾರ್ಯ, ಎಸ್‌.ಎ. ರವೀಂದ್ರನಾಥ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಜಿ.ಎಂ. ಸಿದ್ದೇಶ್ವರ ಇದ್ದಾರೆ. –ಪ್ರಜಾವಾಣಿ ಚಿತ್ರ
ದಾವಣಗೆರೆ ಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. (ಎಡದಿಂದ ಬಲಕ್ಕೆ) ಶಾಸಕರಾದ ಎಸ್‌.ವಿ.ರಾಮಚಂದ್ರ, ಎಂ.ಪಿ.ರೇಣುಕಾಚಾರ್ಯ, ಎಸ್‌.ಎ. ರವೀಂದ್ರನಾಥ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಜಿ.ಎಂ. ಸಿದ್ದೇಶ್ವರ ಇದ್ದಾರೆ. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸಹಕಾರ ಬ್ಯಾಂಕ್‌ಗಳಲ್ಲಿ ನಡೆಯುವ ಭ್ರಷ್ಟಾಚಾರ, ಬ್ಯಾಂಕ್‌ಗಳನ್ನೇ ಮುಳುಗಿಸುವಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಕಠಿಣ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್ ತಿಳಿಸಿದರು.

ನಗರದ ಹೊರವಲಯದ ಸರ್ಕೀಟ್ ಹೌಸ್‌ ಬಳಿ ನಿರ್ಮಿಸಲು ಉದ್ದೇಶಿಸಿರುವ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಡಿಡಿಸಿಸಿ) ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 40ರಿಂದ 50 ಸಂಘಗಳಲ್ಲಿ ಅವ್ಯವಹಾರ ನಡೆಯಬಹುದು. ಅಂದ ಮಾತ್ರಕ್ಕೆ ಇಡೀ ಸಹಕಾರ ಕ್ಷೇತ್ರವನ್ನೇ ದೂಷಿಸುವುದು ತರವಲ್ಲ. ಆದರೂ ಅವ್ಯವಹಾರ ತಡೆಗೆ ಕಾನೂನನ್ನು ಬಿಗಿಗೊಳಿಸಲಿದೆ. ಅವ್ಯವಹಾರ ಕುರಿತು ಅಡಿಷನಲ್ ರಿಜಿಸ್ಟಾರ್‌ಗಳು ತನಿಖೆ ನಡೆಸುತ್ತಿದ್ದಾರೆ. ಕೆಲವು ಸಂಘಗಳಲ್ಲಿ ಅವ್ಯವಹಾರ ಗೊತ್ತಿದ್ದರೂ ಚಾರ್ಟೆಡ್ ಅಕೌಂಟೆಂಟ್ಸ್‌ಗಳು ಮುಚ್ಚಿಟ್ಟಿದ್ದಾರೆ. ಅಂತಹ 51 ಮಂದಿಗೆ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ಹೇಳಿದರು.

ADVERTISEMENT

ಸಾಲ ವಸೂಲಿಗೆ ಅಡ್ಡಿಯಾದ ರಾಜಕಾರಣ:

‘ಸಹಕಾರ ಮಂಡಳಿಯ ಬೋರ್ಡ್‌ನ ವಿರೋಧವಿದ್ದರೂ 4 ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಲಾಗಿದೆ. ಒಂದು ಪೈಸೆ ಸಾಲ ವಸೂಲಿಯಾಗಿಲ್ಲ. ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಿಂದ 24 ಮಂದಿ ಸಾಲ ತೆಗೆದುಕೊಂಡಿದ್ದಾರೆ. ಅವರ ಸಾಲ ₹250 ಕೋಟಿಯಿಂದ ₹300 ಕೋಟಿಗೆ ದಾಟಿದರೂ ಅವರ ಆಸ್ತಿಯನ್ನು ಜಪ್ತಿ ಮಾಡಲು ಹೋಗಿಲ್ಲ. ಏಕೆಂದರೆ ಅವರು ರಾಜಕಾರಣದಲ್ಲಿರುವವರು. ಒಬ್ಬ ರೈತ ₹ 5 ಲಕ್ಷ ಸಾಲ ಮರುಪಾವತಿ ಮಾಡದೇ ಇದ್ದರೆ ಡಂಗುರ ಹೊಡೆಯುತ್ತಾರೆ’ ಎಂದು ವಿಷಾದಿಸಿದರು.

ಒಂದೇ ಸಾಫ್ಟ್‌ವೇರ್:

ರಾಜ್ಯ ಸರ್ಕಾರ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಣೆ, ಮರುಪಾವತಿ, ಲಾಭ, ಡಿವಿಡೆಂಡ್ ಒಳಗೊಂಡಂತೆ ಸೌಲಭ್ಯಗಳು ಸಕಾಲದಲ್ಲಿ ತಲುಪಿಸುವುದು ಸೇರಿ ಎಲ್ಲಾ ವಿಷಯಗಳ ಬಗ್ಗೆ ನಿಗಾವಹಿಸಲು ಕೇಂದ್ರ ಸರ್ಕಾರ ಒಂದೇ ಸಾಫ್ಟ್‌ವೇರ್ ಅಳವಡಿಸುವ ಚಿಂತನೆ ನಡೆಸಿದೆ. ರಾಜ್ಯದಲ್ಲೂ ಸಾಫ್ಟ್‌ವೇರ್ ಅಳವಡಿಸಲಾಗುವುದು ಎಂದು ತಿಳಿಸಿದರು.

ಯಶಸ್ವಿನಿ ಯೋಜನೆ ಮರುಜಾರಿ:

ಯಶಸ್ವಿನಿ ಯೋಜನೆಯನ್ನು ಅಕ್ಟೋಬರ್ 2ರಿಂದ ಮರು ಜಾರಿಗೊಳಿಸಲು ಚಿಂತಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿದ್ದಾರೆ. ಯೋಜನೆಗೆ ಸಂಬಂಧಪಟ್ಟ ಔಪಚಾರಿಕವಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಿಂದೆ ಇದ್ದ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಹೇಳಿದರು.

ನಂದಿನಿ ಕ್ಷೀರ ಸಮುದ್ರ ಬ್ಯಾಂಕ್:

ಹಾಲು ಒಕ್ಕೂಟಗಳಲ್ಲಿ ತೊಡಗಿಸಿಕೊಂಡಿರುವ 26 ಲಕ್ಷ ರೈತರಿಗೆ ಅನುಕೂಲವಾಗುವಂತೆ ‘ನಂದಿನಿ ಕ್ಷೀರ ಸಮುದ್ರ ಬ್ಯಾಂಕ್’ ಆರಂಭಿಸಲಾಗುವುದು. ಆ ಮೂಲಕ ಅವರಿಗೆ ಸದಸ್ಯತ್ವ ನೀಡಿ ಅವರಿಗೆ ಕ್ರೆಡಿಟ್ ಕಾರ್ಡ್ ನೀಡುವ ಚಿಂತನೆ ಇದ್ದು, ಅವರ ಆದಾಯವನ್ನು ದ್ವಿಗುಣಗೊಳಿಸಲಾಗುವುದು’ ಎಂದರು.

‘ಸರ್ಕಾರ ಮಾಡಿದ 151 ರೈತರ ಸಾಲ ಮನ್ನಾ ಯೋಜನೆಯ ಹಣ ನಮ್ಮ ಬ್ಯಾಂಕ್‌ಗೆ ಬಂದಿಲ್ಲ. ರೈತರು ಸಾಲ ಪಾವತಿಸುತ್ತಿಲ್ಲ. ಹೀಗಾಗಿ, ನಾವೇ ಠೇವಣಿದಾರರಿಗೆ ಬಡ್ಡಿ ಕೊಡಬೇಕಾದ ದುಃಸ್ಥಿತಿ ಇದೆ. ಆದ್ದರಿಂದ ಸರ್ಕಾರ ಸಾಲ ಮನ್ನಾದ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ್ ರೆಡ್ಡಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಪ್ರೊ.ಎನ್.ಲಿಂಗಣ್ಣ, ಮೇಯರ್ ಆರ್.ಜಯಮ್ಮ ಗೋಪಿನಾಯ್ಕ, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ರೈತ ಮುಖಂಡ ತೇಜಸ್ವಿ ಪಟೇಲ್, ರಾಜಣ್ಣ ಸಿರಿಗೆರೆ, ಜಗದೀಶ್ ಬಣಕಾರ್ ಇದ್ದರು. ಡಿ.ಶೇಖರಪ್ಪ ಸ್ವಾಗತಿಸಿದರು.

‘ಖಾಲಿ ಚೆಕ್‌ಗೆ ಸಹಿ ಹಾಕಿಸಿಕೊಂಡರೆ ಕಪಾಳಮೋಕ್ಷ ಮಾಡಿ’

‘ಸರ್ಕಾರ ಮನ್ನಾ ಮಾಡಿದ ಸಾಲದ ಹಣವನ್ನು ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರೈತರಿಂದ ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡು ರೈತರ ಹಣ ಗುಳುಂ ಮಾಡಿದ್ದಾರೆ. ಈ ಎಲ್ಲಾ ಅಕ್ರಮಗಳಿಗೆ ಸಹಕಾರ ಸಚಿವ ಸೋಮಶೇಖರ್ ಅವರು ಕಡಿವಾಣ ಹಾಕಬೇಕು ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು.

‘ಖಾಲಿ ಚೆಕ್‌ಗಳಿಗೆ ಹಣ ಸಹಿ ಮಾಡಿಸಿಕೊಳ್ಳುವ ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳಿಗೆ ರೈತರು ಕಪಾಳಮೋಕ್ಷ ಮಾಡಿ ಪಾಠ ಕಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕರ್ನಾಟಕ ನೀರಾವರಿ ನಿಗಮದ ಕಚೇರಿ ಸ್ಥಳಾಂತರ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟಿದ್ದು, ಬೆಂಗಳೂರು ಮಾತ್ರ ಆಡಳಿತ ಕೇಂದ್ರವಾಗಿ ಸೀಮಿತವಾಗಬಾರದು ಎಂಬ ಉದೇಶದಿಂದ ಬೇರೆ, ಬೇರೆ ಜಿಲ್ಲೆಗಳಿಗೆ ಕೆಲ ಕಚೇರಿಗಳನ್ನು ಸ್ಥಳಾಂತರಿಸಿ ಅಧಿಕಾರ ಹಂಚುವ ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನಲ್ಲಿದ್ದ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದಾರೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.