ADVERTISEMENT

ನಮಗಿಂತ ಕೊರೊನಾ ದೊಡ್ಡದಲ್ಲಾರಿ: ಜಾಲಿನಗರದ 68 ವರ್ಷದ ವೃದ್ಧೆ ರಾಧಮ್ಮ

ಬಾಲಕೃಷ್ಣ ಪಿ.ಎಚ್‌
Published 19 ಜುಲೈ 2020, 16:49 IST
Last Updated 19 ಜುಲೈ 2020, 16:49 IST

ದಾವಣಗೆರೆ: ‘ನಮಗಿಂತ ಕೊರೊನಾ ದೊಡ್ಡದಲ್ಲಾರಿ. ಸುಮ್ಮನೆ ಹೆದರಿ ಸಾಯಬ್ಯಾಡ್ರಿ. ನಾವು ಗಟ್ಟಿಯಾಗಿದ್ದರೆ ಕೊರೊನಾ ಏನೂ ಮಾಡಲ್ರೀ...’

ಕೊರೊನಾ ಸೋಂಕು ಬಂದು ಗುಣಮುಖರಾಗಿರುವ ಜಾಲಿನಗರ ಎರಡನೇ ಮೈನ್‌, ಎರಡನೇ ಕ್ರಾಸ್‌ ನಿವಾಸಿ, 69 ವರ್ಷದ ಅಜ್ಜಿ ರಾಧಮ್ಮ ಅವರ ಧೈರ್ಯ ತುಂಬಿದ
ಮಾತುಗಳಿವು.

‘ಜಾಲಿನಗರದಲ್ಲಿ ಕೊರೊನಾ ಬಂದ ಮೇಲೆ ಎಲ್ಲರನ್ನು ಚೆಕ್‌ ಮಾಡಿಸಲು ತಿಳಿಸಿದರು. ದುರ್ಗಾಂಬ ಸ್ಕೂಲ್‌ ಹತ್ತಿರ ನರ್ಸ್‌ಗಳು, ಡಾಕ್ಟರ್‌ಗಳು ಬಂದಿದ್ದರು. ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿದೆ. ಒಂದು ವಾರ ಬಿಟ್ಟು ಫೋನ್‌ ಮಾಡಿದರು. ಡಾಕ್ಟ್ರೋ, ಪೊಲೀಸೋ ಇರಬೇಕು. ನಿಮಗೆ ಕೊರೊನಾ ಬಂದಿದೆ ಅಂದರು. ಮನೆಯಲ್ಲಿ ನಾನು ಮತ್ತು ಮಗಳು ಮಾತ್ರ ಇರೋದು. ನಾವು ಮನೆ ಮೆಟ್ಟಿಲು ಇಳಿದು ಎಲ್ಲೂ ಹೋಗಿಲ್ಲಪ್ಪ ಅಂದೆ. ಹೆಂಗೋ ಬಂದಿದೆ. ನಿಮಗೆ ಪಾಸಿಟಿವ್‌ ಇರೋದ್ರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂದ್ರು. ಮಗಳು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಲು ಆಗಲ್ಲ ಎಂದು ಅವಳನ್ನೂ ತಯಾರಾಗಲು ಹೇಳಿದೆ. ಇಬ್ಬರನ್ನೂ ಮೇ 20ರಂದು ರಾತ್ರಿ ಕರೆದುಕೊಂಡು ಹೋದರು’ ಎಂದು
ವಿವರಿಸಿದರು.

ADVERTISEMENT

‘ಮಗಳು ವಿಜಯಲಕ್ಷ್ಮೀಗೆ ಎರೆಡೆರಡು ಬಾರಿ ಪರೀಕ್ಷೆ ಮಾಡಿದರು. ಅವಳಿಗೆ ನೆಗೆಟಿವ್‌ ಎಂದೇ ಬಂತು. ಮೂರು ದಿನಗಳ ಬಳಿಕ ಅವಳನ್ನು ಆಸ್ಪತ್ರೆಯಿಂದ ಹೋಟೆಲ್‌ಗೆ ಕಳುಹಿಸಿದರು. ನನ್ನನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡರು. ನಂಗೆ ಇಂಜೆಕ್ಷನ್‌, ಎರಡು ಮೂರು ನಮೂನೆಯ ಗುಳಿಗೆ ಕೊಟ್ಟರು’ ಎಂದು ಮಾಹಿತಿ ನೀಡಿದರು.

‘ಸ್ಕ್ಯಾನಿಂಗ್‌ ಅದು–ಇದು ಎಂದು ಆಸ್ಪತ್ರೆಯಲ್ಲಿ ಆಚೀಚೆ ಹೋಗಬೇಕಿತ್ತು. ನಂಗೆ ಆಯಾಸ ಆಗುತ್ತಿತ್ತು. ಅದನ್ನು ಡಾಕ್ಟ್ರಿಗೆ ಹೇಳಿದೆ. ಅದಕ್ಕೆ ಮೂರು ದಿನ ಮೂಗಿಗೆ ಔಷಧ ನೀಡಿದರು. ಒಟ್ಟು 17 ದಿನ ಆಸ್ಪತ್ರೆಯಲ್ಲಿದ್ದೆ. ಡಾಕ್ಟ್ರು, ನರ್ಸ್‌ ಎಲ್ಲ ಚೆನ್ನಾಗಿ ನೋಡಿಕೊಂಡರು’ ಎಂದು ತಿಳಿಸಿದರು.

‘ನಂಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬಳು ನನ್ನ ಜತೆ ಇದ್ದಾಳೆ. ಇನ್ನೊಬ್ಬಳು ಗಂಡನ ಮನೆಯಲ್ಲಿದ್ದಾಳೆ. ಅವಳು ದುಗ್ಗಮ್ಮನ ಜಾತ್ರೆಗೆ ಒಂದು ದಿನ ಬಂದು ಹೋಗಿದ್ದಳು. ಆನಂತರ ಕೊರೊನಾ ಬಂತು. ಅಲ್ಲಿಂದ ಇಲ್ಲಿಯವರೆಗೆ ಅವಳಾಗಲಿ ಮೊಮ್ಮಕ್ಕಳಾಗಲಿ ಬಂದಿಲ್ಲ. ನಾನು ಒಮ್ಮೆ ಸೊಸೈಟಿಗೆ ಹೋಗಿದ್ದು ಬಿಟ್ಟರೆ ಎಲ್ಲೂ ಹೋಗಿಲ್ಲ. ಕೊರೊನಾ ಹೆಂಗೆ ಬಂತೆಂಬುದೇ ಗೊತ್ತಿಲ್ಲ’ ಎಂದರು.

ಗುಂಡಿಗೆ ಗಟ್ಟಿಯಿರಲಿ

‘ನಂಗೆ ಬಿಪಿ, ಶುಗರ್‌ ಎಲ್ಲ ಇದೆ. ಆದರೂ ನಾನು ಹೆದರಿಕೊಂಡಿರಲಿಲ್ಲ. ಜನರಿಗೆ ನಾನು ಅದನ್ನೇ ಹೇಳುತ್ತೇನೆ. ಯಾರೂ ಹೆದರಬೇಡಿ. ಗುಂಡಿಗೆ ಗಟ್ಟಿಯಿರಲಿ. ಮಾಸ್ಕ್ ಹಾಕಿಕೊಂಡು, ದೂರ ದೂರ ಇದ್ದುಬಿಡಿ’ ಎಂದು ರಾಧಮ್ಮ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.