ADVERTISEMENT

ಕೌನ್ಸೆಲಿಂಗ್‌ ಬಹಿಷ್ಕರಿಸಿದ ಶಿಕ್ಷಕರು

ಬಳ್ಳಾರಿ ಜಿಲ್ಲೆಗೆ ಸೇರಿರುವ ಹರಪನಹಳ್ಳಿ ತಾಲ್ಲೂಕನ್ನು ಪರಿಗಣಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 14:25 IST
Last Updated 17 ಅಕ್ಟೋಬರ್ 2018, 14:25 IST
ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ನಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬುಧವಾರ ದಾವಣಗೆರೆಯಲ್ಲಿ ಶಿಕ್ಷಕರು ಡಿಡಿಪಿಐ ಜತೆ ವಾಗ್ವಾದ ನಡೆಸಿದರು
ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ನಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬುಧವಾರ ದಾವಣಗೆರೆಯಲ್ಲಿ ಶಿಕ್ಷಕರು ಡಿಡಿಪಿಐ ಜತೆ ವಾಗ್ವಾದ ನಡೆಸಿದರು   

ದಾವಣಗೆರೆ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಬಳ್ಳಾರಿ ಜಿಲ್ಲೆಗೆ ಸೇರಿರುವ ಹರಪನಹಳ್ಳಿ ತಾಲ್ಲೂಕನ್ನು ಹೊರಗಿಡಬೇಕು ಎಂದು ಒತ್ತಾಯಿಸಿ ಶಿಕ್ಷಕರು ನಗರದ ಕಾವೇರಮ್ಮ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೌನ್ಸೆಲಿಂಗ್‌ ಬಹಿಷ್ಕರಿಸಿದರು. ಈ ಬಹಿಷ್ಕಾರಕ್ಕೆ ಬಗ್ಗದ ಶಿಕ್ಷಣ ಇಲಾಖೆಯು ಕೌನ್ಸೆಲಿಂಗ್‌ ಅನ್ನು ಮುಂದುವರಿಸಿತು.

ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ದಾವಣಗೆರೆ ಜಿಲ್ಲೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಕಲಬುರ್ಗಿ ವಿಭಾಗದಲ್ಲಿ ಬರುತ್ತದೆ. ಈಗ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆಯಿಂದ ಬೇರ್ಪಡಿಸಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಈ ಬಾರಿ ಕೌನ್ಸೆಲಿಂಗ್‌ನಲ್ಲಿ ಹರಪನಹಳ್ಳಿಗೆ ಹೋದರೆ ಮತ್ತೆಂದೂ ದಾವಣಗೆರೆ ಜಿಲ್ಲೆಗೆ ಬರಲಾಗುವುದಿಲ್ಲ. ಮುಂದಿನ ವರ್ಗಾವಣೆಗಳು ಕಲಬುರ್ಗಿ ವಿಭಾಗದಲ್ಲಿಯೇ ನಡೆಯುತ್ತದೆ. ಅದಕ್ಕಾಗಿ ರಿಯಾಯಿತಿಯನ್ನು ನೀಡಬೇಕು ಎಂಬುದು ಶಿಕ್ಷಕರ ಬೇಡಿಕೆಯಾಗಿತ್ತು.

ನಾಲ್ಕು ರಿಯಾಯಿತಿ:

ADVERTISEMENT

ಅವಿವಾಹಿತೆಯರು, ವಿಧವೆಯರು, ಅಂಗವಿಕಲರು ಹಾಗೂ ಸಂಘದ ಪದಾಧಿಕಾರಿಗಳು ಆಗಿದ್ದರೆ ಅವರಿಗಷ್ಟೇ ರಿಯಾಯಿತಿಯನ್ನು ನೀಡಬಹುದಾಗಿದ್ದು, ಉಳಿದವರಿಗೆ ಯಾವುದೇ ರಿಯಾಯಿತಿ ಇಲಾಖೆಯ ಮಾರ್ಗಸೂಚಿಯಲ್ಲಿ ಇಲ್ಲ. ಹರಪನಹಳ್ಳಿ ತಾಲ್ಲೂಕನ್ನು ಹೊರಗಿಡಬೇಕು ಎಂಬ ಶಿಕ್ಷಕರ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಿನ ಮಾರ್ಗಸೂಚಿ ಪ್ರಕಾರವೇ ಕೌನ್ಸೆಲಿಂಗ್‌ ನಡೆಸುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ಡಿಡಿಪಿಐ ಪರಮೇಶ್ವರಪ್ಪ ಸ್ಪಷ್ಟನೆ ನೀಡಿದರು.

ಶಾಸಕರ ಮನೆಗೆ ಶಿಕ್ಷಕರು:

ಡಿಡಿಪಿಐ ಅವರ ಸ್ಪಷ್ಟನೆಯನ್ನು ನಿರಾಕರಿಸಿದ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಕೌನ್ಸೆಲಿಂಗ್‌ ಬಹಿಷ್ಕರಿಸಿ ಹೊರನಡೆದರು. ಅಲ್ಲಿಂದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗೃಹ ಕಚೇರಿಗೆ ಹೋಗಿ ಶಾಸಕರನ್ನು ಭೇಟಿಯಾಗಿದ್ದಾರೆ. ಶಿಕ್ಷಣ ಖಾತೆ ಮುಖ್ಯಮಂತ್ರಿಯವರಲ್ಲಿಯೇ ಇರುವುದರಿಂದ ಅವರ ಜತೆ ಸೋಮವಾರ ಮಾತನಾಡುವುದಾಗಿ ಶಾಮನೂರು ಭರವಸೆ ನೀಡಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದೇಶಿ, ತಾಲ್ಲೂಕು ಅಧ್ಯಕ್ಷ ಎಸ್‌. ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಡಿವಾಳ, ವಿವಿಧ ಕ್ಷೇತ್ರ ವ್ಯಾಪ್ತಿಯ ಮರುಳ ಸಿದ್ದಪ್ಪ, ಕೆ.ಪಿ. ಬಸವರಾಜಪ್ಪ, ಶಿವಲಿಂಗಪ್ಪ, ಪುರುಷೋತ್ತಮ, ವೇದಮೂರ್ತಿ, ಪ್ರಕೃತಿ, ಮಾಹರುದ್ರಪ್ಪ ಒಳಗೊಂಡಂತೆ ಇನ್ನೂರಕ್ಕೂ ಅಧಿಕ ಶಿಕ್ಷಕರು ಇದ್ದರು.

ಮುಂದುವರಿದ ಕೌನ್ಸೆಲಿಂಗ್‌:

ಕೌನ್ಸೆಲಿಂಗ್‌ಗೆ ಅರ್ಹರಾದ ಹೆಚ್ಚುವರಿ ಶಿಕ್ಷಕರು 186 ಮಂದಿ ಇದ್ದಾರೆ. ಹರಪನಹಳ್ಳಿಯೂ ಜಿಲ್ಲೆಯಲ್ಲಿ 70 ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಅದರಲ್ಲಿ 45 ಹುದ್ದೆಗಳು ಹರಪನಹಳ್ಳಿ ತಾಲ್ಲೂಕು ಒಂದರಲ್ಲಿಯೇ ಇವೆ. ಪ್ರತಿಭಟನೆಯನ್ನು ಲೆಕ್ಕಿಸದೆ ಕೌನ್ಸೆಲಿಂಗ್‌ ಮುಂದುವರಿದಿದೆ. ಕೆಲವು ಶಿಕ್ಷಕರು ಮಧ್ಯಾಹ್ನದ ಬಳಿಕ ಒಬ್ಬೊಬ್ಬರಾಗಿ ಬಂದು ಕೌನ್ಸೆಲಿಂಗ್‌ಗೆ ಹಾಜರಾಗಿದ್ದಾರೆ. ಕೆಲವರು ಗೈರು ಹಾಜರಾದರೂ ಕ್ರಮ ಸಂಖ್ಯೆಯ ಆಧಾರದಲ್ಲಿ ಯಾವ ಶಾಲೆ ಎಂಬುದನ್ನು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.