ದಾವಣಗೆರೆ: ಓಮೈಕ್ರಾನ್ ಮತ್ತು ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ಕರ್ಫ್ಯೂ ಜನ ಸಂಚಾರವನ್ನು ವಿರಳಗೊಳಿಸಿತು. ಆದರೆ ಭಾರಿ ಕಟ್ಟುನಿಟ್ಟಿನ ನಿಯಂತ್ರಣ ಕಂಡು ಬರಲಿಲ್ಲ.
ಪ್ರಮುಖ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಬ್ಯಾರಿಕೇಡ್ ರಸ್ತೆ ಸಂಚಾರವನ್ನು ಪೂರ್ತಿ ತಡೆಯುಂತೆ ಅಳವಡಿಸಿರಲಿಲ್ಲ. ಕಿರಾಣಿ ಅಂಗಡಿಗಳು, ಹಾಲು, ಹಣ್ಣು, ತರಕಾರಿ, ಹೂವು, ಮೀನು, ಮಾಂಸದ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರ ಸಂಖ್ಯೆಕ್ಷೀಣವಾಗಿತ್ತು.
ನಗರ ಸಾರಿಗೆ ಬಸ್‌ಗಳು ಹಾಗೂ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಸ್ ಸಂಚಾರಎಂದಿನಂತೆ ಇತ್ತಾದರೂ ಪ್ರಯಾಣಿಕರು ಸಂಖ್ಯೆ ಕಡಿಮೆ ಇತ್ತು. ಬಸ್ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ಕಂಡುಬಂದರು.
ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜಿಗೆ ರಜೆ ನೀಡಲಾಗಿತ್ತು. ಖಾಸಗಿ ಕಂಪನಿಗಳ ಕಚೇರಿಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳು ಕಾರ್ಯನಿರ್ವಹಿಸಿದವು. ಹೋಟೆಲ್, ರೆಸ್ಟೋರಂಟ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಮಾಲ್‌ಗಳು, ಮದ್ಯದ ಅಂಗಡಿಗಳು ಬಾಗಿಲು ಬಂದ್ ಆಗಿದ್ದವು.
ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧವಿತ್ತು. ಬಹುತೇಕ ಕಡೆ ಭಕ್ತರ ದರ್ಶನಕ್ಕೆ, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದವು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರಗಳು ಸರಾಗವಾಗಿ ನಡೆದವು.
ಪ್ರಮುಖ ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಉಳಿದವುಗಳು ಬಂದ್ ಆಗಿದ್ದವು. ಆದರೆ ಒಳ ರಸ್ತೆಗಳಲ್ಲಿ ಸಣ್ಣಪುಟ್ಟ ಎಲ್ಲ ಅಂಗಡಿಗಳು ತೆರೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.