ADVERTISEMENT

ಮಕ್ಕಳಲ್ಲಿ ಸೃಜನಶೀಲ ಮನೋಭಾವ ಬೆಳೆಸಿ: ಕೆ.ವಿ. ನಾಗರಾಜಮೂರ್ತಿ ಸಲಹೆ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:06 IST
Last Updated 25 ಆಗಸ್ಟ್ 2025, 7:06 IST
ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ನಾಟಕೋತ್ಸವವನ್ನು ನೀಲಗುಂದದ ಚನ್ನಬಸವ ಸ್ವಾಮೀಜಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ನಾಟಕೋತ್ಸವವನ್ನು ನೀಲಗುಂದದ ಚನ್ನಬಸವ ಸ್ವಾಮೀಜಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿ ಮಾನವೀಯತೆ ಬೆಳೆಸದಿದ್ದರೆ ಪ್ರಯೋಜನವಾಗದು. ಸಾಹಿತ್ಯ, ಸಂಗೀತ, ಕಲೆ, ನಾಟಕದ ಒಡನಾಟದಿಂದ ಮಾತ್ರವೇ ಮಕ್ಕಳಲ್ಲಿ ಸೃಜನಶೀಲ ಮನೋಭಾವ ಬೆಳೆಸಲು ಸಾಧ್ಯ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ನಾಟಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳನ್ನು ದೂರವಿಟ್ಟು ಶಿಕ್ಷಣ ಕೊಡಿಸಿದರೆ ಮಾನವೀಯತೆ ಬೆಳೆಯದು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಾಹಿತ್ಯದ ಒಲವು, ಸಂಗೀತ ಪ್ರೇಮ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಾಹಿತ್ಯ ಮತ್ತು ಸಂಗೀತದ ಮೇಲೆ ಪ್ರೀತಿ ಇರುವವರಲ್ಲಿ ಮನುಷ್ಯತ್ವವೂ ಇರುತ್ತದೆ. ಜನರ ಮನಸ್ಸನ್ನು ಸೃಜನಶೀಲಗೊಳಿಸಲು ಸಂಗೀತ, ನಾಟಕವೂ ಮುಖ್ಯ. ನಾಟಕದ ಮೇಲೆ ಅಪಾರ ಪ್ರೀತಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕಾಡೆಮಿಗೆ ಹೆಚ್ಚು ಅನುದಾನ ನೀಡಿದ್ದಾರೆ’ ಎಂದು ಹೇಳಿದರು.

‘ಹರಿಕಥೆ, ನಾಟಕ ಸೇರಿದಂತೆ ಹಲವು ಕಲೆಗಳಿಂದ ದೇವರ ಅಸ್ತಿತ್ವ ಸಮಾಜದಲ್ಲಿ ಉಳಿದಿದೆ. ಆಧ್ಯಾತ್ಮವನ್ನು ವ್ಯವಹಾರಿಕ ದೃಷ್ಟಿಯಿಂದ ನೋಡುವ ವರ್ಗಕ್ಕಿಂತಲೂ ರಂಗಭೂಮಿ ಮತ್ತು ಸಂಗೀತ ಕಲಾವಿದರು ದೇವರನ್ನು ಜನಮಾನಸಕ್ಕೆ ಇಳಿಸಿದ್ದಾರೆ. ರಾಜಕೀಯ ಪಕ್ಷಗಳು ದೇವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತವೆ. ಧರ್ಮಸ್ಥಳದ ವಿವಾದ ನಮ್ಮ ಕಣ್ಮುಂದೆ ಇದೆ’ ಎಂದರು.

‘ಪ್ರೇಕ್ಷಕರ ಪ್ರೀತಿಯಿಂದಾಗಿ ರಂಗಭೂಮಿ ಉಳಿದಿದೆ. ಚಾಮರಾಜನಗರ ಜಿಲ್ಲೆಯಿಂದ ಬೀದರ್‌ ವರೆಗೆ ಪ್ರತಿ ಗ್ರಾಮದಲ್ಲಿ ವರ್ಷಕ್ಕೆ ಒಮ್ಮೆಯಾದರೂ ನಾಟಕ ನಡೆಯುತ್ತದೆ. ಅಂದಾಜು ₹ 600 ಕೋಟಿಗೂ ಹೆಚ್ಚು ವಹಿವಾಟು ಇಂತಹ ನಾಟಕಗಳಿಂದ ನಡೆಯುತ್ತಿದೆ. ಸರ್ಕಾರ ನೀಡುವ ಅನುದಾನದಿಂದಷ್ಟೇ ರಂಗಭೂಮಿ ಉಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಗಣೇಶ್ ಅಮಿನಗಡ ಅವರ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿ ಬಿಡುಗಡೆ ಮಾಡಲಾಯಿತು. ನೀಲಗುಂದದ ಚನ್ನಬಸವ ಸ್ವಾಮೀಜಿ, ಕೆಬಿಆರ್‌ ನಾಟಕ ಕಂಪೆನಿಯ ಮಾಲೀಕ ಸಿ.ಎಲ್. ಚಂದ್ರಧರ, ಸಾಹಿತಿ ಬಾ.ಮಾ. ಬಸವರಾಜಯ್ಯ, ಕಲಾವಿದ ಆರ್.ಟಿ. ಅರುಣ್ ಕುಮಾರ್, ಪತ್ರಕರ್ತ ಬಿ.ಎನ್. ಮಲ್ಲೇಶ್, ವಕೀಲ ಎಲ್.ಎಚ್. ಅರುಣ್‌ ಕುಮಾರ್, ಕಲಾವಿದರಾದ ಜ್ಯೋತಿ ಲಕ್ಷ್ಮಿ, ಎನ್.ಎಸ್.ರಾಜು, ಶಶಿಧರ ಹೊಸಾಪುರ, ನೀಲಗುಂದ ಬಸವನಗೌಡ, ಗೋವಿಂದಪ್ಪ, ಎಚ್.ಜಿ.ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಜರಿದ್ದರು.

ರಂಗಭೂಮಿ ಹೃದಯಸ್ಪರ್ಶಿ ತಳಸ್ಪರ್ಶಿಯೂ ಹೌದು. ಇದು ಹೃದಯ ಮನಸ್ಸನ್ನು ಏಕಕಾಲಕ್ಕೆ ತಟ್ಟುತ್ತದೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕರ್ನಾಟಕದ ವಿಶೇಷ
ಮಲ್ಲಿಕಾರ್ಜುನ್‌ ಕಡಕೊಳ ನಿರ್ದೇಶಕ ವೃತ್ತಿ ರಂಗಭೂಮಿ ರಂಗಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.