ADVERTISEMENT

ಸೋಲಿನ ಹತಾಶೆಯಿಂದ ಟೀಕೆ: ದಿನೇಶ್‌ ಕೆ.ಶೆಟ್ಟಿ ವಿರುದ್ಧ ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮೇ 2020, 11:59 IST
Last Updated 20 ಮೇ 2020, 11:59 IST

ದಾವಣಗೆರೆ: ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಹತಾಶರಾಗಿ ಮೇಯರ್‌ ಅಜಯಕುಮಾರ್‌ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಆನಂದರಾವ್‌ ಶಿಂಧೆ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ ಜಿಲ್ಲಾಧಿಕಾರಿ ಮತ್ತು ಮೇಯರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಹಿಂದೆ ಜಿಲ್ಲಾಧಿಕಾರಿಯವರೇ ‘ಡೈನಾಮಿಕ್ ಮೇಯರ್’ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಯಾಗಿ ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಈ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿರುವುದರಿಂದ ದಿನೇಶ್ ಕೆ.ಶೆಟ್ಟಿ ಅವರು ಈ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಜಿಲ್ಲಾಧಿಕಾರಿ ಹಾಗೂ ಮೇಯರ್‌ ಇಬ್ಬರು ಅನೋನ್ಯವಾಗಿದ್ದಾರೆ. ಆದರೆ ಇದನ್ನು ದಿನೇಶ್‌ ಶೆಟ್ಟಿ ಸಹಿಸಿಕೊಳ್ಳುತ್ತಿಲ್ಲ. ಬದಲಾಗಿ ವೈಮನಸ್ಸು ತರಲು ಮುಂದಾಗಿದ್ದಾರೆ. ಅಲ್ಲದೇ ವಾರ್ಡ್‌ನ ಜನರು ಹಣ ಪಡೆದು ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ವಾರ್ಡ್‌ ಜನರಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಉಪ ಮೇಯರ್‌ ಸೌಮ್ಯಾ ನರೇಂದ್ರ ಕುಮಾರ್‌ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರು ಪಡೆದ ಸಾಲ, ಎಲ್‌ಐಸಿ ಹಾಗೂ ಇನ್ನಿತರೆ ಕಂತುಗಳನ್ನು ಮೂರು ತಿಂಗಳವರೆಗೆ ವಿನಾಯಿ ನೀಡಿದೆ. ಎರಡು ತಿಂಗಳಿನಿಂದ ವ್ಯಾಪಾರಿಗಳು ಸಂಕಷ್ಟದಲ್ಲಿದ್ದು, ಟ್ರೇಡ್‌ ಲೈಸೆನ್ಸ್‌ ಮಾಡಿಸಿಕೊಳ್ಳಲು ಪಾಲಿಕೆಯಲ್ಲಿ 90 ದಿನಗಳ ಅವಕಾಶ ಕೊಟ್ಟಿದೆ. ಇದನ್ನೂ ಪ್ರತಿಪಕ್ಷಗಳು ವಿರೋಧಿಸುತ್ತಿವೆಜನರ ಪರವಾಗಿದ್ದರೆ ಇಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದರು.

ದಾವಣಗೆರೆ ಬಿಜೆಪಿ ಉತ್ತರ ಅಧ್ಯಕ್ಷ ಸಂಗನಗೌಡ್ರು, ನರೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.