ADVERTISEMENT

ತಪ್ಪು ತಪ್ಪಿಸಲು ರೈತರಿಂದಲೇ ಬೆಳೆ ಸಮೀಕ್ಷೆ

ಹಳ್ಳಿಗಳಲ್ಲಿ ಕೆಲವೆಡೆ ಇಂಟರ್‌ನೆಟ್‌ ಸಮಸ್ಯೆ, ಹಲವೆಡೆ ಮಾಹಿತಿಯ ಕೊರತೆ

ಬಾಲಕೃಷ್ಣ ಪಿ.ಎಚ್‌
Published 20 ಆಗಸ್ಟ್ 2020, 6:04 IST
Last Updated 20 ಆಗಸ್ಟ್ 2020, 6:04 IST
ಶ್ರೀನಿವಾಸ್ ಚಿಂತಾಲ್
ಶ್ರೀನಿವಾಸ್ ಚಿಂತಾಲ್   

ದಾವಣಗೆರೆ: ರೈತರು ಬೆಳೆದಿರುವ ಬೆಳೆಯ ಬಗ್ಗೆ ರೈತರೇ ನಮೂದು ಮಾಡುವ ಬೆಳೆ ಸಮೀಕ್ಷೆ ಆ್ಯಪ್‌ ಅನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೃಷಿ ಇಲಾಖೆ ಬಿಡುಗಡೆ ಮಾಡಿದೆ. ರೈತರ ಸ್ಪಂದನ ಇನ್ನೂ ವೇಗ ಪಡೆದುಕೊಂಡಿಲ್ಲ. ಅದಕ್ಕೆ ಹಳ್ಳಿಗಳಲ್ಲಿ ಕೆಲವು ಕಡೆ ನೆಟ್‌ ಸರಿಯಾಗಿ ದೊರಕದೇ ಇರುವುದು ಮೊದಲ ಕಾರಣವಾದರೆ, ಹಲವು ರೈತರಿಗೆ ಈ ಬಗ್ಗೆ ಇನ್ನೂ ಮಾಹಿತಿ ಇರದಿರುವುದು ಎರಡನೇ ಕಾರಣವಾಗಿದೆ.

ಜಿಲ್ಲೆಯಲ್ಲಿ 4 ಲಕ್ಷ ಮಂದಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ಆದರೆ 12 ಸಾವಿರ ಅಷ್ಟೇ ಆಗಿವೆ. ಆ.24 ಬೆಳೆ ಸಮೀಕ್ಷೆಯ ಕೊನೇ ದಿನವಾಗಿದೆ.

‘ಐದು ಎಕರೆ ಜಮೀನಿದೆ. ಅದರಲ್ಲಿ ಬೆಂಡೆ, ಟೊಮೆಟೊ, ಮೆಣಸಿನಕಾಯಿ ಬೆಳೆದಿದ್ದೇನೆ. ಭತ್ತ ಕೂಡ ಬೆಳೆಯುತ್ತೇನೆ. ಬೆಳೆ ಸಮೀಕ್ಷೆ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಯಾರೂ ಮಾಹಿತಿ ನೀಡಿಲ್ಲ’ ಎನ್ನುವುದು ಮಲ್ಲನಾಯಕನಹಳ್ಳಿಯ ರೈತ ರಾಜಪ್ಪ ಅವರ ಅಭಿಪ್ರಾಯ.

ADVERTISEMENT

‘ಆ್ಯಪ್‌ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಕೆಲವು ಅಪ್‌ಲೋಡ್‌ ಆಗುತ್ತಿರಲಿಲ್ಲ. ಅಪ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ಇಲಾಖೆಯವರು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಅದನ್ನು ನೋಡಿ ಸರಿಪಡಿಸಿಕೊಂಡೆ. ನಾವು ಅಡಿಕೆ ಮತ್ತು ಭತ್ತ ಮಾತ್ರ ಬೆಳೆಯುವುದರಿಂದ ಅಪ್‌ಲೋಡ್‌ ಸುಲಭವಾಯಿತು’ ಎಂದು ಕುಂಬಳೂರಿನ ರೈತ ಹರೀಶ್‌ ಆ್ಯಪ್‌ ಬಳಕೆ ಬಗ್ಗೆ ಮಾಹಿತಿ ನೀಡಿದರು.

‘ನನಗೆ ಐದು ಎಕರೆ ಜಮೀನಿದೆ. ಎರಡು ಸರ್ವೆ ನಂಬರ್‌ಗಳಿವೆ. ಅಡಿಕೆ ಗಿಡಗಳ ಸಂಖ್ಯೆ ಬರೆಯುವಾಗ ಒಟ್ಟು ಸಂಖ್ಯೆ ನಮೂದಿಸಿದೆ. ಈಗ ಅದನ್ನು ತಿದ್ದಿ, ಎರಡು ಸರ್ವೆ ನಂಬರ್‌ಗಳಲ್ಲಿ ನಮೂದಿಸಲು ಆಗುತ್ತಿಲ್ಲ. ಅಲ್ಲದೇ ಸರಿಯಾಗಿ ನೆಟ್‌ವರ್ಕ್‌ ಕೂಡ ಇಲ್ಲದೇ ಸಮಸ್ಯೆಯಾಗಿದೆ’ ಎಂದು ಕೃಷಿಕ ಹರಳಹಳ್ಳಿ ರೇವಣಸಿದ್ದಪ್ಪ ಅವರ ಅನುಭವವಾಗಿದೆ.

‘ತೀರ ಗ್ರಾಮೀಣ ‍ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರಬಹುದೇನೋ ಗೊತ್ತಿಲ್ಲ. ನಾವು ನೋಡಿದ ಎಲ್ಲ ಹಳ್ಳಿಗಳಲ್ಲಿ ಇಂಟರ್‌ನೆಟ್‌ ಸಿಗುತ್ತದೆ. ರೈತರ ಮನೆಯಲ್ಲಿ ಒಬ್ಬರಾದರೂ ಸ್ಮಾರ್ಟ್‌ಫೋನ್‌ ಚೆನ್ನಾಗಿ ಬಳಕೆ ಮಾಡುವುವರು ಇರುತ್ತಾರೆ. ಹಾಗಾಗಿ ಗೂಗಲ್ ಪ್ಲೇಸ್ಟೋರ್‌ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಕಷ್ಟವಲ್ಲ. ಇದು ಆರಂಭಿಕ ಹಂತವಾಗಿರುವುದರಿಂದ ಕೆಲವರಿಗೆ ಸಮಸ್ಯೆಯಂತೆ ಕಂಡಿರಬೇಕು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್‌ ಜಿ.ಸಿ. ‘ಪ್ರಜಾವಾಣಿ’ಗೆ ವಿವರಿಸಿದರು.

‘ಯಾರದೋ ಜಮೀನಿನಲ್ಲಿ ಇನ್ಯಾರೋ ಸಮೀಕ್ಷೆ ನಡೆಸುವುದು ಇದರಿಂದ ತಪ್ಪುತ್ತದೆ. ಸರ್ವೆ ನಂಬರ್‌, ಬೆಳೆಗಳ ಬಗ್ಗೆ ತಪ್ಪು ಮಾಹಿತಿ ಕೂಡ ಇರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.