ADVERTISEMENT

ರೈತರು ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ: ರೇವಣಸಿದ್ದನಗೌಡ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:42 IST
Last Updated 30 ಜೂನ್ 2025, 15:42 IST
ನ್ಯಾಮತಿಯಲ್ಲಿ ರೈತರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ರೇವಣಸಿದ್ದನಗೌಡ, ತಹಶೀಲ್ದಾರ್ ಎಂ.ಪಿ.ಕವಿರಾಜ ರೈತರಿಗೆ ರೈನ್‌ಕೋಟ್‌ ಅನ್ನು ಉಚಿತವಾಗಿ ವಿತರಿಸಿದರು 
ನ್ಯಾಮತಿಯಲ್ಲಿ ರೈತರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ರೇವಣಸಿದ್ದನಗೌಡ, ತಹಶೀಲ್ದಾರ್ ಎಂ.ಪಿ.ಕವಿರಾಜ ರೈತರಿಗೆ ರೈನ್‌ಕೋಟ್‌ ಅನ್ನು ಉಚಿತವಾಗಿ ವಿತರಿಸಿದರು    

ನ್ಯಾಮತಿ: ‘ತಾಲ್ಲೂಕಿನ ರೈತರು ಬೆಳೆಗಳಿಗೆ ಸಂಬಂಧಿಸಿದಂತೆ ವಿಮೆ, ಹಾನಿ ಪರಿಹಾರ ಸೇರಿ ವಿವಿಧ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕಿದೆ’ ಎಂದು ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ವಿಮೆ, ಬೆಳೆ ಪರಿಹಾರ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯುವ ಬಗ್ಗೆ ರೈತರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2025– 26ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್‌ನಿಂದ ರಾಜ್ಯದ ಯಾವುದೇ ಭಾಗದ ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಮೊಬೈಲ್ ತಂತ್ರಾಂಶದ ಮೂಲಕ ವೀಕ್ಷಿಸಬಹುದಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ಸರ್ಕಾರ ಬೆಳೆ ಪರಿಹಾರ ನೀಡುತ್ತದೆ. ಬೆಂಬಲ ಬೆಲೆಯಡಿ ರೈತರು ತಾವು ಬೆಳೆದ ಫಸಲು ಮಾರಾಟ ಮಾಡಬೇಕಾದರೂ ಬೆಳೆ ಸಮೀಕ್ಷೆ ಮಾಡಿರಬೇಕು’ ಎಂದು ಅದರ ಮಹತ್ವವನ್ನು ವಿವರಿಸಿದರು.

ADVERTISEMENT

‘ಸಮೀಕ್ಷೆ ತಪ್ಪಾದಲ್ಲಿ ರೈತರಿಗೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಇದರ ಬಗ್ಗೆ ಮಾಹಿತಿಗಾಗಿ ರೈತರು ತಮ್ಮ ತಮ್ಮ ಗ್ರಾಮಗಳಲ್ಲಿ ನೇಮಕವಾಗಿರುವ ವ್ಯಕ್ತಿಗಳಲ್ಲಿ ಜಮೀನಿನ ಸಮೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಹೇಳಿದ ಅವರು, ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸುವುದರ ಬಗ್ಗೆಯೂ ಮಾಹಿತಿ ನೀಡಿದರು.

ತಹಶೀಲ್ದಾರ್ ಎಂ.ಪಿ.ಕವಿರಾಜ, ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ, ಕೃಷಿ ಅಧಿಕಾರಿ ಡಿ.ಕೆ.ಮಂಜುನಾಥ, ಸವಿತಾ, ಸಹಾಯಕ ತೋಟಗಾರಿಕೆ ಅಧಿಕಾರಿ ಸತೀಶನಾಯ್ಕ, ರೇವಣಸಿದ್ದಪ್ಪ, ಉಪಕೋಶ ನಿರ್ದೇಶಕರು ಹಾಗೂ ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.