ADVERTISEMENT

‘ತನ್ನ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಯತ್ನ’

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 19:17 IST
Last Updated 12 ಜೂನ್ 2025, 19:17 IST
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಭಾಗಿಯಾಗಿದ್ದರು
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಭಾಗಿಯಾಗಿದ್ದರು   

ದಾವಣಗೆರೆ: ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಜಾತಿ ಜನಗಣತಿ, ಕೋಮು ಸಂಘರ್ಷ ನಿಗ್ರಹ ಪಡೆ ಎಂಬ ವಿಚಾರಗಳನ್ನು ಪ್ರಸ್ತಾಪಿಸುತ್ತಾ, ವಿಷಯಾಂತರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಡೀ ರಾಜ್ಯ ಸರ್ಕಾರವೇ ಅಸಮರ್ಥವಾಗಿದೆ. ಹಲವು ಹಗರಣಗಳಲ್ಲಿ ಸರ್ಕಾರ ಭಾಗಿಯಾಗಿದೆ. ಶೇ 60ರಷ್ಟು ಕಮಿಷನ್ ಬಗ್ಗೆ ಗುತ್ತಿಗೆದಾರರೇ ಆರೋಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶೂನ್ಯ ಮಾರ್ಕ್ಸ್ ಕೊಡಲು ಸಿದ್ದರಾಮಯ್ಯ ಯಾರು? ದೇಶದ ಜನರು ಮೋದಿ ಆಡಳಿತಕ್ಕೆ ನೂರು ಅಂಕ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಕ ನೀಡಬೇಕಾಗಿರುವುದು ಜನರೇ ಹೊರತು ರಾಜಕಾರಣಿಗಳಲ್ಲ. ಮೋದಿ ಅವರು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸ್ವಾರ್ಥ ರಾಜಕಾರಣದಲ್ಲಿ ಶೂನ್ಯ ಅಂಕ ಪಡೆದಿದ್ದಾರೆ’ ಎಂದರು. 

ADVERTISEMENT

‘ಸ್ವಾತಂತ್ರ್ಯಾನಂತರದ 60 ವರ್ಷಗಳ ವರೆಗೆ ರೋಟಿ, ಕಪಡಾ, ಮಕಾನ್ ಎಂದು ಹೇಳಿಕೊಂಡೇ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ವ್ಯವಸ್ಥೆಯನ್ನೇ ಮೋದಿ ಬುಡಮೇಲು ಮಾಡಿದ್ದಾರೆ. ಸಾಂಸ್ಕೃತಿಕ ಪುನರುತ್ಥಾನದಿಂದ ಡಿಜಿಟಲ್‌ನ ತಂತ್ರಜ್ಞಾನದವರೆಗೆ ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದರ, ಭಾರತ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಈ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ’ ಎಂದು ಅವರು ವಿವರಿಸಿದರು.

ಹಿಂದಿನ ಸರ್ಕಾರಗಳು ಜಾತಿ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುತ್ತಿದ್ದವು. ಆದರೆ, ಮೋದಿ ಸರ್ಕಾರವು 11 ವರ್ಷಗಳಲ್ಲಿ ಬಡತನದ ಆಧಾರದ ಮೇಲೆ ಯೋಜನೆ ರೂಪಿಸಿದೆ. ಜಿ–20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದರು.  

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಬಿ.ಎಂ. ಸತೀಶ್ ಕೊಳೇನಹಳ್ಳಿ, ಮಾಡಾಳ್ ಮಲ್ಲಿಕಾರ್ಜುನ್, ಚಂದ್ರಶೇಖರ್ ಪೂಜಾರ್, ಅನಿಲ್‌ಕುಮಾರ್ ನಾಯ್ಕ, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ್, ಆರ್.ಎಲ್. ಶಿವಪ್ರಕಾಶ್, ನಸೀರ್ ಅಹ್ಮದ್, ಎಚ್.ಸಿ. ಜಯಮ್ಮ, ಭಾಗ್ಯ ಪಿಸಾಳೆ ಮತ್ತಿತರರಿದ್ದರು.

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಇ.ಡಿ. ದಾಳಿ ನಡೆದಿದೆ. ಅವರು (ಕಾಂಗ್ರೆಸ್‌) ಹಗರಣವನ್ನು ಸಮರ್ಥಿಸಿಕೊಳ್ಳುತ್ತಾರೆಯೇ?
-ಸಿ.ಟಿ.ರವಿ. ವಿಧಾನ ಪರಿಷತ್ ಸದಸ್ಯ

‘ನಿಮ್ಮನ್ನು ಆ ಮೆಟ್ಟಿಲಲ್ಲೇ ಕೂರಿಸುತ್ತೇವೆ’

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಆಕಸ್ಮಿಕ ಘಟನೆ ಅಲ್ಲ. ಅದು ಕಾಂಗ್ರೆಸ್ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದ ಆಗಿದ್ದು. ಸರ್ಕಾರ ತನ್ನ ತಪ್ಪು ಒಪ್ಪಿಕೊಂಡು ಜನರ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಒತ್ತಾಯಿಸಿದರು

‘ರಾಜ್ಯ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಾತ್ರ ಸಂಭ್ರಮಾಚರಣೆ ಏರ್ಪಡಿಸಲಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದರೆ ನೀವು ನೀವು ವಿಧಾನಸೌಧದ ಮೆಟ್ಟಿಲಿಗೆ ಮಾತ್ರ ಮುಖ್ಯಮಂತ್ರಿಯೇ. ನೀವು ಹಾಗೆಯೇ ಹೇಳಿದರೆ ನಿಮ್ಮನ್ನು ಆ ಮೆಟ್ಟಿಲಲ್ಲೇ ಕೂರಿಸುತ್ತೇವೆ’ ಎಂದು ಎಚ್ಚರಿಸಿದರು. ‘ಆರ್‌ಸಿಬಿ ಕರ್ನಾಟಕದ ತಂಡವೇ. ವಿಜಯ ಮಲ್ಯ ಬ್ರ್ಯಾಂಡ್ ಉತ್ತೇಜಿಸುವುದು ಸರ್ಕಾರದ ಉದ್ದೇಶವೇ? ಆತುರದ ಬದಲು ಸರಕಾರಕ್ಕೆ ಸಂಯಮ ಇದ್ದಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ಈ ದುರಂತ ನಡೆದ ಮೇಲೂ ದೋಸೆ ತಿನ್ನುವುದು ಕಪ್‌ಗೆ ಮುತ್ತು ಕೊಡುವುದು ಸೌಜನ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಬಿಜೆಪಿ ಟ್ವೀಟ್ ಆತುರದ ನಿರ್ಧಾರ’

: ‘ಆರ್‌ಸಿಬಿ ಸಂಭ್ರಮ ಆಚರಣೆಗೆ ಅವಕಾಶ ನೀಡುವಂತೆ ಬಿಜೆಪಿ ಟ್ವೀಟ್ ಮಾಡಿದ್ದು ಆತುರದ ನಿರ್ಧಾರ
ವಾಗಿತ್ತು. ಈ ಸಂಬಂಧ ಪಕ್ಷ ಸಹ ತಪ್ಪು ಮಾಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿಮಾನದ ಅತಿರೇಕಕ್ಕೆ ಹೋಗಬೇಡಿ ಎಂದು ಜೂನ್‌ 2ರಂದು ಸಲಹೆ ನೀಡಿದ್ದೆ. ಅಂದು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಅನೇಕರು ಟೀಕಿಸಿದ್ದರು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.