ADVERTISEMENT

ದಾಗಿನಕಟ್ಟೆ ಪವರ್ ಸ್ಟೇಷನ್ ಸ್ಥಾಪನೆಗೆ ದಾರಿಯ ಸಮಸ್ಯೆ

ಎಂಟು ವರ್ಷಗಳ ಹಿಂದೆ ಮಂಜೂರಾದ ಯೋಜನೆಗೆ ಗ್ರಹಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:10 IST
Last Updated 10 ಆಗಸ್ಟ್ 2025, 2:10 IST
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿ ತಿರುವಿನ ಬಳಿ ವಿದ್ಯುತ್ ಪವರ್ ಸ್ಟೇಷನ್ ಸ್ಥಾಪನೆಗೆ ಸರ್ಕಾರ ಮಂಜೂರು ಮಾಡಿರುವ ನಿವೇಶನ
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿ ತಿರುವಿನ ಬಳಿ ವಿದ್ಯುತ್ ಪವರ್ ಸ್ಟೇಷನ್ ಸ್ಥಾಪನೆಗೆ ಸರ್ಕಾರ ಮಂಜೂರು ಮಾಡಿರುವ ನಿವೇಶನ   

ಬಸವಾಪಟ್ಟಣ: ಸಮೀಪದ ದಾಗಿನಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರ ಮಂಜೂರು ಮಾಡಿರುವ 11/66 ಕೆ.ವಿ ಸಾಮರ್ಥ್ಯದ ಪವರ್‌ ಸ್ಟೇಷನ್ ನಿರ್ಮಾಣಕ್ಕೆ ದಾರಿ ಸಮಸ್ಯೆ ಎದುರಾಗಿದೆ.

ರೈತರ ಒತ್ತಾಯದ ಮೇರೆಗೆ ಎಂಟು ವರ್ಷಗಳ ಹಿಂದೆ ಆಗಿನ ಶಾಸಕ ಕೆ.ಶಿವಮೂರ್ತಿ ನಾಯ್ಕ ಅವರ ಶಿಫಾರಸು ಆಧರಿಸಿ ಪವರ್‌ ಸ್ಟೇಷನ್‌ ಮಂಜೂರಾಯಿತು. ಅಗತ್ಯ ನಿವೇಶನ ದೊರೆಯದ ಕಾರಣ ಯೋಜನೆ ಅನುಷ್ಠಾನ ವಿಳಂಬವಾಯಿತು. ಮೂರು ತಿಂಗಳ ಹಿಂದೆಯಷ್ಟೇ ದಾಗಿನಕಟ್ಟೆಗೆ ಸೇರಿದ ಸರ್ವೆ ನಂಬರ್‌ 105ರಲ್ಲಿ ಎರಡು ಎಕರೆ ನಿವೇಶನ ಮಂಜೂರಾಗಿದೆ. ಆದರೆ ಕಾಮಗಾರಿ ನಡೆಸಬೇಕಿರುವ ಸ್ಥಳಕ್ಕೆ ತೆರಳಲು ದಾರಿ ಸಮಸ್ಯೆ ತಲೆದೋರಿದ್ದು, ಇದಕ್ಕೆ ಕೆಪಿಟಿಸಿಎಲ್‌ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಜಿ.ಬಿ.ಜಗದೀಶ್‌ ಅಭಿಪ್ರಾಯಪಟ್ಟರು.

ಘಟಕ ಮಂಜೂರಾಗಿರುವ ನಿವೇಶನದ ಸಮೀಪದಲ್ಲಿ 10 ಗುಂಟೆ ಜಾಗವನ್ನು ಮಾರಾಟ ಮಾಡಲು ಅಲ್ಲಿನ ಆಸಕ್ತ ರೈತರು ಮುಂದಾಗಿದ್ದಾರೆ. ತುಂಡು ಭೂಮಿಯನ್ನು ಖರೀದಿಸಲು ಇಂಧನ ಇಲಾಖೆ ಜೊತೆ ಅಧಿಕಾರಿಗಳು ಚರ್ಚಿಸಿ ದಾರಿ ಒದಗಿಸಿದರೆ, ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗೆ ಮರುಜೀವ ಬರಲಿದೆ ಎಂದರು. 

ADVERTISEMENT

ತುಂಡು ಭೂಮಿ ಖರೀದಿಗೆ ನಿಗದಿತ ಮೊತ್ತವನ್ನು ಮಾತ್ರ ನೀಡುವುದಾಗಿ ಅಧಿಕಾರಿಗಳು ಪಟ್ಟು ಹಿಡಿದರೆ ಈ ಯೋಜನೆ ಮತ್ತೆ ವಿಳಂಬವಾಗಲಿದೆ. ಈ ಭಾಗದ ರೈತರು ತುಂಡು ಭೂಮಿಯನ್ನೇ ಜೀವನಾಧಾರವಾಗಿ ಇಟ್ಟುಕೊಂಡಿದ್ದು, ಅಲ್ಪ ಬೆಲೆಗೆ ಮಾರಾಟ ಮಾಡಲು ಒಪ್ಪುವುದಿಲ್ಲ. ₹20 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಪವರ್‌ ಸ್ಟೇಷನ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ. ದಾರಿ ಜಾಗ ಖರೀದಿಗೆ ಅಂದಾಜು ₹20 ಲಕ್ಷ ಖರ್ಚು ಮಾಡಲು ಅಧಿಕಾರಿಗಳು ನಿರ್ಧರಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಎಸ್‌.ಸಂತೋಷ್‌ ಹೇಳಿದರು.

ದಿನನಿತ್ಯದ ವಿದ್ಯುತ್‌ ಸಮಸ್ಯೆ ನಿವಾರಣೆ ಆಗಬೇಕು. ಹಾಗಾಗಿ ಅಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಕೀರಪ್ಪ, ಓ.ಜಿ.ಕಿರಣ್‌, ಮಾಜಿ ಅಧ್ಯಕ್ಷರಾದ ಎಚ್‌.ಎಸ್‌.ಮಂಜುನಾಥ್‌, ಟಿ.ಸಿ.ಉಮೇಶ್‌ ಒತ್ತಾಯಿಸಿದ್ದಾರೆ.

ಬಸವಾಪಟ್ಟಣ ಬೆಸ್ಕಾಂ ಶಾಖೆಯ ವ್ಯಾಪ್ತಿಯಲ್ಲಿ 5000ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು, ಸಾಕಷ್ಟು ಸಣ್ಣ ಉದ್ದಿಮೆಗಳು ವಿದ್ಯುತ್‌ ಸಂಪರ್ಕ ಪಡೆದಿವೆ. ಅನಿಯಮಿತ ವಿದ್ಯುತ್ ಕಡಿತದಿಂದ ಈವರೆಗೆ 2,000ಕ್ಕೂ ಟಿ.ಸಿ.ಗಳು ಸುಟ್ಟಿದ್ದು, ಪಂಪ್‌ಸೆಟ್‌ಗಳಿಗೆ ಸಪರ್ಮಕ ವಿದ್ಯುತ್‌ ಸರಬರಾಜು ಆಗದೇ ಬೆಳೆಗಳು ಹಾಳಾಗುತ್ತಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.