ADVERTISEMENT

ರಾಜ್ಯಪಾಲರ ಕಾರ್ಯಕ್ರಮದಲ್ಲಿ ದಲಿತ ಶಾಸಕರಿಗೆ ಅವಮಾನ: ಕಾಂಗ್ರೆಸ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:13 IST
Last Updated 7 ಡಿಸೆಂಬರ್ 2022, 5:13 IST
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು   

ದಾವಣಗೆರೆ: ಎರಡು ದಿನಗಳ ಹಿಂದೆ ಆರ್‌ಎಸ್‍ಎಸ್ ಪ್ರಾಯೋಜಿತ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ದಲಿತ ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸುವ ಮೂಲಕ ರಾಜ್ಯಪಾಲರ ಸಮ್ಮುಖದಲ್ಲೇ ಸಂವಿಧಾನ ಬದ್ಧವಾಗಿ ಆಯ್ಕೆಯಾದವರನ್ನು ಅಪಮಾನಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ದೂರಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಅನೇಕ ಸಂಕಷ್ಟಗಳನ್ನು ಎದುರಿಸಿ ಈ ದೇಶದ ಎಲ್ಲಾ ಜನರು ಒಂದೇ ಎಂಬ ಸಂವಿಧಾನ ರಚಿಸಿಕೊಟ್ಟರೆ, ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸುವ ಮೂಲಕ ಮನುವಾದಿಗಳು, ಕೋಮುವಾದಿಗಳಿಗೆ ದಲಿತರಿಗೆ ಅಧಿಕಾರ ಸಿಕ್ಕಿರುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದರು.

ADVERTISEMENT

ಈ ಬಗ್ಗೆ ಆರ್‌ಎಸ್‌ಎಸ್ ಮತ್ತು ಆ ಕಾರ್ಯಕ್ರಮದ ಸಂಘಟಕರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಹಿಂದೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಅವರ ಸಹಕಾರದಿಂದ ಅಂದಿನ ನಗರಸಭೆ ಮುಂಭಾಗ ಅಂಬೇಡ್ಕರ್ ಮತ್ತು ಜಗಜೀವನ ರಾಂ ಅವರ ಪ್ರತಿಮೆಯನ್ನು ಆನಾವರಣಗೊಳಿಸಲಾಯಿತು ಎಂದು ನೆನಪಿಸಿಕೊಂಡರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ವತಿಯಿಂದ ಕಚೇರಿಯಲ್ಲಿ ದಾರ್ಶನಿಕರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸದೇ ಶಾಲಾ-ಕಾಲೇಜುಗಳಲ್ಲಿ ಆಚರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್‍ಸಾಬ್, ‘ಅಂಬೇಡ್ಕರ್ ರಚಿಸಿರುವ ಸಂವಿಧಾನ ಈ ದೇಶದ ಎಲ್ಲ ಧರ್ಮಗಳಿಗೆ ಶ್ರೇಷ್ಠಗ್ರಂಥ. ಪ್ರತಿಯೊಬ್ಬರು ಸಂವಿಧಾನವನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ದೇಶದಲ್ಲಿ ಶೇ 2ರಷ್ಟಿರುವ ಪುರೋಹಿತಶಾಹಿಗಳು ಶೇ 98ರಷ್ಟು ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸಬೇಕು ಎಂದು ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ತಿಳಿಸಿದರು.

ಪಾಲಿಕೆ ಸದಸ್ಯ ಎ. ನಾಗರಾಜ್, ಮಾಜಿ ಸದಸ್ಯ ಡಿ.ಎನ್. ಜಗದೀಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಮಹ್ಮದ್ ಸಮೀವುಲ್ಲಾ, ರವಿಧಣಿ, ಟಿ. ರಮೇಶ್, ರಾಕೇಶ್, ಸಾಗರ್, ಯುವರಾಜ್, ಹರೀಶ್ ಕೆ.ಎಲ್.ಬಸಾಪುರ, ಅಲೆಕ್ಸಾಂಡರ್ (ಜಾನು) ವೀರಭದ್ರಪ್ಪ, ಕಣ್ಣಾಳ್ ಅಂಜಿನಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.