ADVERTISEMENT

ಹರಿಹರ: ಅಹಿಂದ ವರ್ಗಕ್ಕೆ ಭೂಮಿ ದೊರೆತದ್ದು ಕೃಷ್ಣಪ್ಪರ ಹೋರಾಟದಿಂದ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:18 IST
Last Updated 13 ಸೆಪ್ಟೆಂಬರ್ 2025, 4:18 IST
ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು 
ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು    

ಹರಿಹರ: ಪ್ರೊ.ಬಿ.ಕೃಷ್ಣಪ್ಪ ಅವರು ನಡೆಸಿದ ಹಲವಾರು ಹೋರಾಟಗಳ ಪರಿಣಾಮ ಕರ್ನಾಟಕದಲ್ಲಿ ದಲಿತ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಾಯಿತು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದರು.

ನಗರದ ಎಸ್‌ಜೆವಿಪಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಜ್ವಾಲಾಮುಖಿಯಂತೆ ಸ್ಫೋಟಗೊಂಡ ಸಂಘಟನೆ ಅತಿ ಕಡಿಮೆ ಅವಧಿಯಲ್ಲಿ ರಾಜ್ಯದ ಮೂಲೆ, ಮೂಲೆಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ ದೊಡ್ಡ ಶಕ್ತಿಯಾಗಿ ರೂಪುಗೊಂಡಿತು. ಜಾತಿವಾದಿಗಳಿಗೆ ಮತ್ತು ಆಳುವ ವರ್ಗಗಳಿಗೆ ಹಾಗೂ ಭೂ ಮಾಲೀಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು’ ಎಂದು ಹೇಳಿದರು.

ADVERTISEMENT

ಹೋಬಳಿಗೊಂದು ವಸತಿ ಶಾಲೆ, ವಿದ್ಯಾರ್ಥಿ ವೇತನ, ದಲಿತರಿಗೆ ಭೂಮಿ ಮಂಜೂರಾತಿ, ಮೌಢ್ಯಾಚರಣೆ ವಿರೋಧಿಸಿ ಹೋರಾಟ, ಮೀಸಲಾತಿ ಸೇರಿ ಹತ್ತಾರು ಬಗೆಯ ನಿರಂತರ ಹೋರಾಟ ಆಡಳಿತಗಾರರ ಕಣ್ಣು ತೆರೆಸಿದವು ಎಂದು ಹೇಳಿದರು.

‘20ನೇ ಶತಮಾನದ 4 ದಶಕಗಳ ಹೋರಾಟದ ಮೂಲಕ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಕ್ಷಣೆಗಾಗಿ ಅತ್ಯಂತ ಸಮರ್ಥವಾಗಿ ಮುಖಾಮುಖಿಯಾದ ಕೃಷ್ಣಪ್ಪನವರು ರಾಜ್ಯದ ಬಹುದೊಡ್ಡ ಹೋರಾಟಗಾರರಾಗಿ ಹೊರಹೊಮ್ಮಿದರು. ಅಖಂಡ ಮಾನವತಾವಾದಿ ಬಿ.ಆರ್‌.ಅಂಬೇಡ್ಕರ್ ಅವರ ಆಲೋಚನೆಗಳನ್ನು ರಾಜ್ಯದ ಕೇರಿ, ಕೇರಿಗಳಲ್ಲಿ ಬಿತ್ತಿದ ಕೃಷ್ಣಪ್ಪನವರು ಒಂದು ಹೊಸ ಸಾಂಸ್ಕೃತಿಕ ಪ್ರಜ್ಞೆಯ ವಲಯವನ್ನು ಕಟ್ಟುವ ಮೂಲಕ ದಲಿತರ ಬದುಕಿಗೆ ದಾರಿ ದೀಪವಾದರು’ ಎಂದು ಶ್ಲಾಘಿಸಿದರು.

ರಿಪ್ಪನಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಪ್ರೊ.ಬಿ.ಎಲ್. ರಾಜು ಡಾ.ಅಂಬೇಡ್ಕರ್‌ ಅವರ ಕುರಿತು ಉಪನ್ಯಾಸ ನೀಡಿದರು.

ಪ್ರಾಧ್ಯಾಪಕ ರಮೇಶ್ ಕೆ.ಪರ್ವತಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್, ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಎನ್.ಎಚ್.ಪಾಟೀಲ ಮಾತನಾಡಿದರು. ಕಡ್ಲೆಗೊಂದಿ ತಿಮ್ಮಣ್ಣ, ಕಡತಿ ನಾಗರಾಜಪ್ಪ, ಸಂಜೀವ್, ಅಣ್ಣಪ್ಪ, ಬಸವರಾಜ್, ರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.