ADVERTISEMENT

ನೃತ್ಯ, ಸಂಗೀತಗಳು ಭಾರತೀಯ ಪರಂಪರೆಯ ಜೀವನಾಡಿ

ಪುರಂದರದಾಸ, ತ್ಯಾಗರಾಜ, ವಾಗ್ಗೇಯಕಾರ ಸ್ಮರಣೋತ್ಸವದಲ್ಲಿ ಓಂಕಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 1:52 IST
Last Updated 12 ಫೆಬ್ರುವರಿ 2021, 1:52 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಪುರಂದರದಾಸರ , ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೆ ಕಾರ್ಯಕ್ರಮವನ್ನು ಓಂಕಾರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಆಯೋಜಿಸಿದ್ದ ಪುರಂದರದಾಸರ , ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೆ ಕಾರ್ಯಕ್ರಮವನ್ನು ಓಂಕಾರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ದಾವಣಗೆರೆ: ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯಗಳು ಭಾರತೀಯ ಪರಂಪರೆಯ ಜೀವನಾಡಿಗಳು ಎಂದು ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಆರ್‌.ಎಚ್‌. ಸೀತಾಮಂದಿರದಲ್ಲಿ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪುರಂದರದಾಸ, ತ್ಯಾಗತಾಜ ಹಾಗೂ ವಾಗ್ಗೇಯಕಾರರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ನವವಿಧ ಭಕ್ತಿಗಳಲ್ಲಿ ಸಂಗೀತಕ್ಕೂ ಮಹತ್ವದ ಸ್ಥಾನವಿದೆ. ಸಂಗೀತ ಶಿಕ್ಷಣ ಪಡೆದ ಮಕ್ಕಳು ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ. ಅದಕ್ಕಾಗಿ ಮೊಬೈಲ್‌ ಸಂಸ್ಕೃತಿಯಿಂದ ದೂರವಿರಬೇಕು ಎಂದು ತಿಳಿಸಿದರು.

ADVERTISEMENT

ಹಿರಿಯ ಪತ್ರಕರ್ತ ಎಚ್‌.ಬಿ. ಮಂಜುನಾಥ್‌ ಮಾತನಾಡಿ, ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಾಸರ ಮತ್ತು ಶರಣರ ಸಾಹಿತ್ಯವು ಭಕ್ತಿರಸಕ್ಕಷ್ಟೇ ಸೀಮಿತವಾಗದೇ ಸಮಾಜ ಸುಧಾರಣೆಗೆ ಸಮರ್ಥ ಸಾಧನಗಳೂ ಆಗಿದ್ದವು. ಪುರಂದರ ದಾಸರ ಕೀರ್ತನೆಗಳು ಸಮಾಜದ ಅಂಕುಡೊಂಕುಗಳನ್ನು ನಿರ್ಭಿಡೆಯಿಂದ ಟೀಕಿಸಿ ಅದಕ್ಕೆ ಪರಿಹಾರಗಳನ್ನೂ ಸೂಚಿಸಿವೆ. ಸಂಗೀತಾಭ್ಯಾಸಿಗಳು ಕೃತಿಗಳ ಭಾವಾರ್ಥಗಳನ್ನು ತಿಳಿದು ಹಾಡಬೇಕು’ ಎಂದು ಸಲಹೆ ನೀಡಿದರು.

ನಾಟ್ಯಭಾರತಿಯ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತತಜ್ಞ ಪ್ರಹ್ಲಾದರಾವ್‌ ಮಂಗಳ, ಪತ್ರಕರ್ತ ಬಕ್ಕೇಶ್ ನಾಗನೂರು ಮಾತನಾಡಿದರು.

ನಾಟ್ಯಭಾರತಿಯ ಕಾರ್ಯದರ್ಶಿ ಶ್ರೀಕಾಂತ್‌ ಕುಲಕರ್ಣಿ, ನೃತ್ಯ ಶಿಕ್ಷಕ ಶ್ರೀನಿಧಿ ಕುಲಕರ್ಣಿ, ರಾಜಶೇಖರ್‌, ಕಲಾವಿದರಾದ ನಾಗೇಶ್‌ ಭಟ್‌, ರಾಕೇಶ್‌, ಜಯಾ ಅವರೂ ಇದ್ದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಂಗೀತ, ನೃತ್ಯಗಳಿಗೆ ಕ್ರಿಸ್ತಾನಂದ ಭರತೇಶ್‌ ಖಮಿತ್ಕರ್‌ ವಾದ್ಯ ಸಹಕಾರ ನೀಡಿದರು. ವಸಂತಾ ಅವರು ರಂಗೋಲಿಯಲ್ಲಿ ಪುರಂದರ ದಾಸರ ಆಕರ್ಷಕ ಬೃಹತ್‌ ಚಿತ್ರ ಬಿಡಿಸಿದರು. ಸಂಗೀತ, ನೃತ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಾಟ್ಯ ಭಾರತೀಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.