ದಾವಣಗೆರೆ: ಇಲ್ಲಿನ ವಿರಕ್ತಮಠದಲ್ಲಿ ಬುಧವಾರ 113ನೇ ವರ್ಷದ ಬಸವ ಜಯಂತ್ಯುತ್ಸವ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ವಚನ ಗ್ರಂಥಗಳ ಮೆರವಣಿಗೆ ಹಾಗೂ ಗುರು ಬಸವಣ್ಣನವರ ತೊಟ್ಟಿಲು ಸಮಾರಂಭ ನಡೆಯಿತು.
ವಿರಕ್ತಮಠದಿಂದ ಆರಂಭಗೊಂಡ ವಚನಗ್ರಂಥಗಳ ಮೆರವಣಿಗೆ ಬಕ್ಕೇಶ್ವರ ದೇವಸ್ಥಾನ – ಹಾಸಬಾವಿ ವೃತ್ತ– ಬಸವರಾಜಪೇಟೆ– ಹಳೇಪೇಟೆ ಮಾರ್ಗದಲ್ಲಿ ಸಾಗಿ ವಿರಕ್ತಮಠದಲ್ಲಿ ಕೊನೆಗೊಂಡಿತು. ನಂತರ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆಯಿತು. ನವಜಾತ ಶಿಶುಗಳಿಗೆ ನಾಮಕರಣ ಮಾಡಲಾಯಿತು.
ಲಿಂಗಾಯತ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಬಸವ ಪ್ರಭಾತ್ ಫೇರಿ ಸಮಿತಿಯ ಅಧ್ಯಕ್ಷ ಬಕ್ಕೇಶ್ ಎನ್., ಕಾರ್ಯದರ್ಶಿ ಜಿ.ಮಹಾಂತೇಶ್ ಸೇರಿದಂತೆ ಹಲವರು ಮುಖಂಡರು, ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಸವ ಜಯಂತ್ಯುತ್ಸವ ಅಂಗವಾಗಿ ಏಪ್ರಿಲ್ 24ರಿಂದ 30ರ ವರೆಗೆ ವಿರಕ್ತಮಠದಿಂದ ಪ್ರಭಾತ ಫೇರಿ ಹಮ್ಮಿಕೊಳ್ಳಲಾಗಿತ್ತು. ಬಸವ ಕಲಾಲೋಕದಿಂದ ನಿತ್ಯವೂ ವಚನ ಭಜನೆ ನಡೆಯಿತು.
‘ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವಕೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಗಿತ್ತು. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಮೃತ್ಯುಂಜಯ ಅಪ್ಪ, ಹರ್ಡೇಕರ ಮಂಜಪ್ಪನವರು ಬಸವಪ್ರಭಾತ ಫೇರಿಯನ್ನು ಪ್ರಾರಂಭಿಸಿದರು. ನಂತರ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪನವರು ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.
ಜಾತಿಗಣತಿ ವರದಿ ಬಗ್ಗೆ ಸಂಪೂರ್ಣ ಚಿಂತನ ಮಂಥನ ನಡೆಯಲಿ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರಿದ್ದು ಈ ವಿಷಯದಲ್ಲಿ ಅವರ ಮನವಿಯನ್ನೂ ಸರ್ಕಾರ ಪರಿಶೀಲಿಸಲಿ
-ಬಸವಪ್ರಭು ಸ್ವಾಮೀಜಿ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.