ADVERTISEMENT

ಬಿಳಿಚೋಡು: ಕೆನರಾಬ್ಯಾಂಕ್ ಎಟಿಎಂ ಕಳವು ಯತ್ನ ವಿಫಲ

ಬೆಂಕಿ ಹೊತ್ತಿಕೊಂಡಿದ್ದರಿಂದ ಪರಾರಿಯಾದ ಕಳ್ಳರ ತಂಡ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:13 IST
Last Updated 28 ಜೂನ್ 2025, 16:13 IST
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ಕಳ್ಳರ ಹಣ ದೋಚುವ ಯತ್ನ ವಿಫಲವಾಗಿದೆ.
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ಕಳ್ಳರ ಹಣ ದೋಚುವ ಯತ್ನ ವಿಫಲವಾಗಿದೆ.   

ಜಗಳೂರು: ತಾಲ್ಲೂಕಿನ ಬಿಳಿಚೋಡು ಗ್ರಾಮದ ಕೆನರಾಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಹಣ ಕಳವಿಗೆ ಪ್ರಯತ್ನಿಸಿದ್ದು, ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಗಾಬರಿಗೊಂಡ ಕಳ್ಳರು ಪರಾರಿಯಾಗಿದ್ದಾರೆ.

ಬಿಳಿಚೋಡು ಗ್ರಾಮದ ಭರಮಸಾಗರದ ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಮಧ್ಯರಾತ್ರಿ 1 ಗಂಟೆಗೆ ನುಗ್ಗಿದ ಕಳ್ಳರು ಕಬ್ಬಿಣದ ಸರಳುಗಳನ್ನು ಬಳಸಿ ಹಣ ಇದ್ದ ಯಂತ್ರವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದ ಕಾರಣ ಯಂತ್ರದೊಳಕ್ಕೆ ಪೆಟ್ರೋಲ್ ಸುರಿದು ತೆರೆಯಲು ಯತ್ನಿಸಿದ ಸಮಯದಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಕೇಂದ್ರದ ತುಂಬಾ ದಟ್ಟ ಹೊಗೆ ಕಾಣಿಸಿಕೊಂಡಿದೆ. ಎಚ್ಚೆತ್ತುಕೊಂಡ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಬಳಿಕ ಸ್ಥಳಕ್ಕೆ ಧಾವಿಸಿದ ಬಿಳಿಚೋಡು ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ.

ADVERTISEMENT

ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶನಿವಾರ ಶ್ವಾನ ದಳ, ಬೆರಳಚ್ಚು ಸಿಬ್ಬಂದಿ ಹಾಗೂ ಸಿಪಿಐ ನಾಗರಾಜ್, ಎಸ್.ಐ. ರಮೇಶ್ ನೇತೃತ್ವದಲ್ಲಿ ಪೊಲೀಸರು ಪರಿಶೀಲಿಸಿದರು.

ಎಟಿಎಂ ಕೇಂದ್ರಕ್ಕೆ ಭದ್ರತೆ ಇಲ್ಲ: ಹೊನ್ನಾಳಿಯ ಬ್ಯಾಂಕ್‌ನಲ್ಲಿ ಕಳವು ಪ್ರಕರಣದ ನಂತರ ಜಿಲ್ಲಾಡಳಿತ ಕಳೆದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ, ಇಲ್ಲಿನ ಎಟಿಎಂ ಕೇಂದ್ರದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಸಮರ್ಪಕವಾಗಿ ಅಳವಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.