ADVERTISEMENT

ಹಿಂಗಾರು ಬಿತ್ತನೆ ಕಾರ್ಯ ಚುರುಕು

ಚನ್ನಗಿರಿ ತಾಲ್ಲೂಕಿನಲ್ಲಿ ಅಲಸಂದೆ ಬೆಳೆ ಬೆಳೆಯಲು ಮುಂದಾಗಿರುವ ರೈತರು

ಎಚ್.ವಿ.ನಟರಾಜ್
Published 1 ನವೆಂಬರ್ 2022, 5:33 IST
Last Updated 1 ನವೆಂಬರ್ 2022, 5:33 IST
ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಅಲಸಂದೆ ಬೆಳೆ.
ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಅಲಸಂದೆ ಬೆಳೆ.   

ಚನ್ನಗಿರಿ: ತಾಲ್ಲೂಕಿನಾದ್ಯಂತ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಹೆಚ್ಚಾಗಿ ಅಲಸಂದೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಜತೆಗೆ ಕಡಲೆ ಬೆಳೆಯನ್ನೂ ಬಿತ್ತನೆ ಮಾಡುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯ ಕಾರಣ ಬೆಳೆಗಳು ಹಾಳಾಗಿದ್ದವು. ಈ ನಷ್ಟವನ್ನು ಹಿಂಗಾರು ಬೆಳೆಯಲ್ಲಿ ತೆಗೆದುಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿ ರೈತರು ಅಲಸಂದೆ ಹಾಗೂ ಕಡಲೆ ಬೆಳೆಯನ್ನು ಈಗಾಗಲೇ ಬಿತ್ತನೆ ಮಾಡಿದ್ದು, ಇನ್ನು ಕೆಲವು ರೈತರು ಈಗ ಬಿತ್ತನೆ ಮಾಡಲು ಮುಂದಾಗಿದ್ದಾರೆ.

ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿ ಕೇವಲ 1,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದರು. ಆದರೆ, ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯಲು ಪೂರಕ ವಾತಾವರಣ ಇರುವುದರಿಂದ 1,550 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಹಾಗೂ 200 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಯನ್ನು ಒಂದು ತಿಂಗಳಿಂದ ರೈತರು ಬಿತ್ತನೆ ಮಾಡುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲಿ 1,050 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರೆ, ಕಸಬಾ, ಬಸವಾಪಟ್ಟಣ ಹೋಬಳಿಗಳಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಬೆಳೆಯನ್ನು ಬಿತ್ತಲಾಗಿದೆ. ಸಾಮಾನ್ಯವಾಗಿ ಅಲಸಂದೆ ಬೆಳೆ ಬಿತ್ತನೆ ಮಾಡಿದ 90 ದಿನಗಳಿಗೆ ಕೊಯ್ಲಿಗೆ ಬರುತ್ತದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೆ 500 ಕ್ವಿಂಟಲ್ ಸುಧಾರಿತ ಡಿ.ಸಿ 15 ತಳಿಯ ಅಲಸಂದೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಲಾಗಿದೆ.

‘ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಅರ್ಧದಷ್ಟು ಹಾಳಾಯಿತು. ಪಾಪ್ ಕಾರ್ನ್ ಮೆಕ್ಕೆಜೋಳ ಬೆಳೆಯನ್ನು ಮುಂಗಾರು ಹಂಗಾಮಿನಲ್ಲಿ ಹಾಕಲಾಗಿತ್ತು. ಈ ಬೆಳೆಯನ್ನು ಕೊಯ್ಲು ಮಾಡಿದ ನಂತರ ಭೂಮಿಯನ್ನು ಉಳುಮೆ ಮಾಡಿ 3 ಎಕರೆ ಪ್ರದೇಶದಲ್ಲಿ ಅಲಸಂದೆ ಬೆಳೆಯನ್ನು ಬಿತ್ತನೆ ಮಾಡಿದ್ದೆ. ಬೆಳೆ ಸಮೃದ್ಧವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಲಸಂದೆ ಕ್ವಿಂಟಲ್‌ಗೆ ₹ 6,800ರಿಂದ ₹ 7,200 ದರ ಇದೆ. ಬೆಳೆ ಕೈ ಸೇರುವ ವೇಳೆಗೆ ಇದೇ ದರ ರೈತರಿಗೆ ಸಿಕ್ಕರೆ ಮುಂಗಾರು ಹಂಗಾಮಿನಲ್ಲಿ ಆದ ನಷ್ಟವನ್ನು ಈ ಬೆಳೆಯಿಂದ ತುಂಬಿಕೊಳ್ಳಬಹುದು’ ಎನ್ನುತ್ತಾರೆ ದೇವರಹಳ್ಳಿ ಗ್ರಾಮದ ರೈತ ಪರಶುರಾಮಪ್ಪ.

ಉತ್ತಮ ಇಳುವರಿ ನಿರೀಕ್ಷೆ

ಅಲಸಂದೆ ಬಿತ್ತಿ 20 ದಿನಗಳಾಗಿರುವ ಕಡೆಗಳಲ್ಲಿ ಬೆಳೆ ಸಮೃದ್ಧವಾಗಿದೆ. ಯಾವುದೇ ರೋಗ ಬಾಧೆ ಕಂಡು ಬಂದಿರುವುದಿಲ್ಲ. ಆದರೂ ಕಡಿಮೆ ಫಲವತ್ತತೆಯ ಮರಳು ಮತ್ತು ಅತಿಯಾದ ಮಳೆಯಿಂದ ಬೆಳೆಯು ಹಳದಿ ಬಣ್ಣಕ್ಕೆ ತಿರುಗಿ, ಬೆಳವಣಿಗೆ ಕುಂಠಿತವಾಗಿದ್ದಲ್ಲಿ ನೀರಿನಲ್ಲಿ ಕರಗುವ 19 ಆಲ್ ರಸಗೊಬ್ಬರ ಹಾಗೂ ಮೆಕ್ರೊನ್ಯೂಟ್ರಿಯಂಟ್ ಟಾನಿಕ್ ದ್ರಾವಣದ ಮಿಶ್ರಣವನ್ನು ಸಿಂಪಡಿಸಬೇಕು. ಬೆಳೆಯಲ್ಲಿ ರಸ ಹೀರುವ ಹಾಗೂ ಎಲೆಗಳನ್ನು ತಿನ್ನುವ ಕೀಟಗಳ ಬಾಧೆಗೆ ಬಯೋ ಮೆಟಾಕ್ಲಾಮ್ ಕೀಟನಾಶಕವನ್ನು ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಅರುಣಕುಮಾರ್ ತಿಳಿಸಿದರು.

ನವೆಂಬರ್ ತಿಂಗಳಲ್ಲಿ ಹಿಂಗಾರು ಹಂಗಾಮಿನ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಜಮೀನುಗಳಲ್ಲಿ ಮಳೆಯ ನೀರು ನಿಲ್ಲದಂತೆ ರೈತರು ಗಮನಹರಿಸಬೇಕು. ಜತೆಗೆ ಕೀಟನಾಶಕ ಹಾಗೂ ಲಘು ಪೋಷಕಾಂಶಗಳನ್ನು ಕಡ್ಡಾಯವಾಗಿ ನೀಡಬೇಕು. ಇನ್ನು ಎರಡು ಬಾರಿ ಸಾಮಾನ್ಯ ಮಳೆಯಾದರೆ ಈ ಬಾರಿ ಅಲಸಂದೆ ಹಾಗೂ ಕಡಲೆ ಉತ್ತಮ ಇಳುವರಿ ಬರುವುದು ಖಚಿತ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.