ಬಸವಾಪಟ್ಟಣ: ಈ ಭಾಗದ ಪ್ರಮುಖ ಆರ್ಥಿಕ ಬೆಳೆಯಾದ ಅಡಿಕೆ ಕೊಯಿಲು ಮತ್ತು ಸಂಸ್ಕರಣೆ ಜುಲೈ ಎರಡನೇ ವಾರದಿಂದ ಆರಂಭವಾಗಿದೆ.
ಅಡಿಕೆ ದರ ದಿನೇದಿನೇ ಹೆಚ್ಚಾಗುತ್ತಿದ್ದಂತೆಯೇ ಭತ್ತ, ಮೆಕ್ಕೆಜೋಳ, ಹೈಬ್ರೀಡ್ ಜೋಳ ಬೆಳೆಯುವ ಪ್ರದೇಶವೆಲ್ಲ ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿದ್ದು, ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 5,000 ಹೆಕ್ಟೇರ್ ಪ್ರದೇಶದ ಅಡಿಕೆ ಫಸಲಿನ ಕೊಯಿಲು ಮತ್ತು ಸಂಸ್ಕರಣೆ ಭರದಿಂದ ಸಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಅಂದಾಜು 38,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಹಸಿ ಅಡಿಕೆ ಸುಲಿಯುವುದು, ಬೇಯಿಸುವ ಕಾರ್ಯದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಪ್ರತಿವರ್ಷ ಜುಲೈನಿಂದ ಮುಂದಿನ ಜನವರಿವರೆಗೆ ನಿರಂತರವಾಗಿ ಕೆಲಸ ಸಿಗುತ್ತಿದೆ. 15 ಕೆ.ಜಿ. ತೂಗುವ ಒಂದು ಡಬ್ಬ ಹಸಿ ಅಡಿಕೆ ಸುಲಿಯಲು ₹ 140 ಕೂಲಿ ಇದೆ. ಮಹಿಳೆಯರು ದಿನಕ್ಕೆ ಐದರಿಂದ ಆರು ಡಬ್ಬ ಅಡಿಕೆ ಸುಲಿದು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಈಗ ಅಡಿಕೆ ಸುಲಿಯಲು ಯಂತ್ರಗಳು ಬಂದಿವೆ. ಯಂತ್ರಗಳ ಮೂಲಕ ಅಡಿಕೆ ಸುಲಿದರೂ, ಪ್ರತಿ ಅಡಿಕೆಯಲ್ಲಿ ಉಳಿಯುವ ತೆಳುವಾದ ಸಿಪ್ಪೆಯನ್ನು ಬೇರ್ಪಡಿಸಲು ಮಹಿಳಾ ಕಾರ್ಮಿಕರ ಅಗತ್ಯವಿದ್ದು, ಆ ಮೂಲಕವೂ ಮಹಿಳೆಯರು ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ ಎನ್ನುತ್ತಾರೆ ಕಣಿವೆಬಿಳಚಿಯ ಅಡಿಕೆ ಬೆಳೆಗಾರ ಎಸ್.ಅಣ್ಣೋಜಿರಾವ್.
‘ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಅಡಿಕೆ ಸುಲಿಯುವ ಕೆಲಸ ನಡೆಯುತ್ತಿದ್ದು, ಕೂಲಿ ದೊರೆಯುತ್ತಿದೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಅಲ್ಪಸ್ವಲ್ಪ ಉಳಿತಾಯ ಕೂಡ ಮಾಡುತ್ತಿದ್ದೇವೆ’ ಎಂದು ಮಹಿಳಾ ಕಾರ್ಮಿಕರಾದ ಹಾಲಮ್ಮ ಮತ್ತು ವೀರಮ್ಮ ತಿಳಿಸಿದರು.
ಈ ಬಾರಿ ಬೇಸಿಗೆಯಲ್ಲಿ ಉಷ್ಣತೆ 40ರಿಂದ 42 ಡಿಗ್ರಿ ಸೆಲ್ಸಿಯಸ್ ಇತ್ತು. ಪರಿಣಾಮವಾಗಿ ಅಡಿಕೆಯ ಹರಳುಗಳು ನೆಲಕ್ಕೆ ಬಿದ್ದು, ಇಳುವರಿ ಕಡಿಮೆಯಾಗಿದೆ. ಪ್ರತಿ ವರ್ಷ ಎಕರೆಗೆ 8ರಿಂದ 10 ಕ್ವಿಂಟಲ್ ಬರುತ್ತಿದ್ದ ಇಳುವರಿ ಈ ವರ್ಷ ಎಕರೆಗೆ ಐದು ಕ್ವಿಂಟಲ್‌ಗೆ ಇಳಿಕೆಯಾಗಿದೆ. ಅಡಿಕೆ ಉತ್ಪಾದನೆ ಕಡಿಮೆ ಆಗಿರುವುದರಿಂದ ಕ್ವಿಂಟಲ್ ದರ ₹ 48,000ಕ್ಕೆ ಖರೀದಿಯಾಗುತ್ತಿದೆ. ಆದರೆ, ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಇಲ್ಲಿನ ಅಡಿಕೆ ಬೆಳೆಗಾರ ಕೆ.ರುದ್ರಪ್ಪ.
ತಮ್ಮ ಮನೆ ಅಥವಾ ಕಣಗಳ ಆವರಣದಲ್ಲಿ ಹಸಿ ಅಡಿಕೆ ಸುಲಿಸಲು ಅವಕಾಶವಿಲ್ಲದ ಬೆಳೆಗಾರರು ಯಂತ್ರಗಳ ಮಾಲೀಕರ ಮೂಲಕ ಅಡಿಕೆ ಸುಲಿಸುತ್ತಾರೆ. ಒಂದು ಡಬ್ಬದಲ್ಲಿ ಶೇಖರಿಸಬಹುದಾದ 15 ಕೆ.ಜಿ. ತೂಕದಷ್ಟು ಅಡಿಕೆಯನ್ನು ಯಂತ್ರಗಳಿಂದ ಸುಲಿದು, ಅದರ ಮೇಲಿರುವ ಸಿಪ್ಪೆ ತೆಗೆದು ಬೇಯಿಸಲು ₹ 150 ಕೂಲಿ ನೀಡಬೇಕು. ನಂತರ ಹದವಾಗಿ ಬೇಯಿಸಿ ಒಣಗಿಸುವ ಕಾರ್ಯದಲ್ಲಿ ಪುರುಷ ಕಾರ್ಮಿಕರಿಗೂ ಸಾಕಷ್ಟು ಉದ್ಯೋಗ ದೊರೆಯುತ್ತಿದೆ ಎಂದು ರೈತ ಬಸವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.