ADVERTISEMENT

ಬೆರಗು ಮೂಡಿಸಿದ ಬೆನಕನಹಳ್ಳಿಯ ರೈತ

ಕಾಳುಮೆಣಸಿನಿಂದ ಲಾಭದತ್ತ ಮುಖ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 5:13 IST
Last Updated 29 ಜೂನ್ 2022, 5:13 IST
ಬೆನಕನಹಳ್ಳಿಯ ರೈತ ಚಂದ್ರಶೇಖರ್ ಎಸ್.ಕೆ. ಅವರು ಅಡಿಕೆ ಮರಕ್ಕೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿರುವುದು.
ಬೆನಕನಹಳ್ಳಿಯ ರೈತ ಚಂದ್ರಶೇಖರ್ ಎಸ್.ಕೆ. ಅವರು ಅಡಿಕೆ ಮರಕ್ಕೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿರುವುದು.   

ಸಾಸ್ವೆಹಳ್ಳಿ: ಸಮೀಪದ ಬೆನಕನಹಳ್ಳಿ ಗ್ರಾಮದ ರೈತ ಎಸ್.ಕೆ. ಚಂದ್ರಶೇಖರ್ ತಮ್ಮ ಅಡಿಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಲಾಭ ಕಂಡುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಕಾಳುಮೆಣಸು ಬೆಳೆದ ಅನುಭವಿಗಳ ಮಾರ್ಗದರ್ಶನದಂತೆ, ತಾಯಿ ಸಸಿಯಿಂದ ಬೇರ್ಪಡಿಸಿದ ಕಾಳುಮೆಣಸಿನ ಟೊಂಗೆಗಳನ್ನು ತಂದು ಪ್ಯಾಕೆಟ್‌ಗಳಲ್ಲಿ ಹಾಕಿ, ನೀರುಣಿಸಿ, ಗಿಡ ಸ್ವಲ್ಪ ದೊಡ್ಡದಾದ ನಂತರ ಅಡಿಕೆ ಮರದ ಬುಡದಲ್ಲಿ ನಾಟಿ ಮಾಡಿದ್ದಾರೆ.

‘ಮರಗಳನ್ನು ಆಧರಿಸಿ ಬೆಳೆಯುವ ಕಾಳುಮೆಣಸು ಕೃಷಿಯಲ್ಲಿ ಬೋನಸ್ ಇದ್ದಂತೆ. ಇದು ರೈತರ ಪಾಲಿಗೆ ‘ಕಪ್ಪು ಬಂಗಾರ’ ಇದ್ದಂತೆ. ಕಾಳುಮೆಣಸು ಬೆಳೆಯುವುದರಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಭಾರತದಲ್ಲಿ ವರ್ಷಕ್ಕೆ 50,000 ಮೆಟ್ರಿಕ್ ಟನ್ ಕಾಳುಮೆಣಸು ಉತ್ಪಾದನೆಯಾದರೆ, ಆ ಪೈಕಿ ರಾಜ್ಯದ ಪಾಲು 35,000 ಮೆಟ್ರಿಕ್ ಟನ್. ಮನೆಗಳ ಹಿತ್ತಲಲ್ಲೂ ಕಾಳುಮೆಣಸು ಬೆಳೆಯಬಹುದು’ ಎನ್ನುತ್ತಾರೆ ಎಸ್.ಕೆ. ಚಂದ್ರಶೇಖರ್.

ADVERTISEMENT

‘ಒಂದೂವರೆ ಎಕರೆಯಲ್ಲಿ ಅಡಿಕೆಯಿಂದ ವಾರ್ಷಿಕ 18ರಿಂದ 20 ಕ್ವಿಂಟಲ್ ಇಳುವರಿ ಬಂದಿದೆ. ಇದರೊಟ್ಟಿಗೆ 8 ಕ್ವಿಂಟಲ್ ಕಾಳುಮೆಣಸು ಸಿಕ್ಕಿದೆ. ಕ್ವಿಂಟಲ್‌ ಕಾಳುಮೆಣಸಿಗೆ ₹ 52,000ದಂತೆ ಒಟ್ಟು ₹ 4 ಲಕ್ಷ ಆದಾಯ ದೊರೆತಿದೆ. ಕಾಳುಮೆಣಸು ಮತ್ತು ಅಡಿಕೆಗೆ ಯಾವುದೇ ಔಷಧೋಪಾಚಾರ ಮಾಡಿಲ್ಲ. ಸಾವಯವ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರ ನೀಡುತ್ತಾ ಬಂದಿದ್ದೇನೆ. ಕಟಾವು, ಒಣಗಿಸುವುದು, ಸಂಸ್ಕರಣೆ ಎಲ್ಲ ಸೇರಿ ₹ 1.5 ಲಕ್ಷದಿಂದ ₹ 2ಲಕ್ಷದವರೆಗೆ ಖರ್ಚಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಸಾಧ್ಯವಾದಷ್ಟು ಹೊಲ ಉಳುಮೆ ಮಾಡುವುದಿಲ್ಲ. ಆಗಿಂದಾಗೆ ಪವರ್ ರೋಟರಿ ಟಿಲ್ಲರ್‌ನಿಂದ ಕಳೆ ಸಣ್ಣದಿರುವಾಗಲೇ ಬೇರಿಗೆ ತಾಗದಂತೆ ಬೇಸಾಯ ಮಾಡಲಾಗುತ್ತದೆ. ಈ ವರ್ಷದಿಂದ ಅಡಿಕೆ, ಕಾಳುಮೆಣಸಿನ ಜೊತೆಗೆ ಏಲಕ್ಕಿ ಬೆಳೆಯಲೂ ಸಿದ್ಧತೆ ನಡೆಸಿದ್ದೇವೆ. ಕುಟುಂಬದ ಸದಸ್ಯರ ಸಹಕಾರ ಇರುವುದರಿಂದ ಕೂಲಿ ಆಳುಗಳ ಸಮಸ್ಯೆ ಇಲ್ಲ’ ಎಂದು ಅವರು ವಿವರಿಸಿದರು.

ಕಾಳುಮೆಣಸು ಬೆಳಯಲು ಇಚ್ಛಿಸುವ ಆಸಕ್ತರಿಗೆಚಂದ್ರಶೇಖರ್‌ ಅವರು ಉಚಿತವಾಗಿ ಕಾಳುಮೆಣಸಿನ ಬಳ್ಳಿಗಳನ್ನು ನೀಡುತ್ತಿದ್ದು, ಅಗತ್ಯ ಇರುವವರು ಮೊಬೈಲ್‌ ದೂರವಾಣಿ ಸಂಖ್ಯೆ: 84949–68374 ಸಂಪರ್ಕಿಸಬಹುದು.

* ಬಹಳಷ್ಟು ಜನ ಅಡಿಕೆ ನಡುವೆ ಕಾಳುಮೆಣಸು ಬೆಳದರೆ ಅಡಿಕೆ ಇಳುವರಿ ಕಡಿಮೆಯಾಗುತ್ತದೆ ಎಂದುಕೊಂಡಿದ್ದಾರೆ. ಆದರೆ, ನನ್ನ ಅನುಭವದ ಪ್ರಕಾರ ಅಡಿಕೆ ಇಳುವರಿ ಹೆಚ್ಚಾಗಿದೆ. ಈ ಹಿಂದೆ ಎಕರೆಗೆ 10 ಕ್ವಿಂಟಲ್‌ ಬರುತ್ತಿತ್ತು. ಈಗ 12 ಕ್ವಿಂಟಲ್‌ಗೆ ಹೆಚ್ಚಿದೆ.

-ಎಸ್.ಕೆ. ಚಂದ್ರಶೇಖರ್, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.