ADVERTISEMENT

ಮಹಾನಗರ ಪಾಲಿಕೆ ದಿವಾಳಿ: ಗಡಿಗುಡಾಳ್ ಮಂಜುನಾಥ್’

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 3:00 IST
Last Updated 3 ಜುಲೈ 2022, 3:00 IST

ದಾವಣಗೆರೆ: ಮಹಾನಗರ ಪಾಲಿಕೆ ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಯುಜಿಡಿ, ತುರ್ತು ಕಾಮಗಾರಿ ಸೇರಿದಂತೆ ಯಾವುದಕ್ಕೂ ಹಣ ನೀಡುತ್ತಿಲ್ಲ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಆರೋಪಿಸಿದರು.

‘ಮೇಯರ್ ಜಯಮ್ಮ ಗೋಪಿನಾಯ್ಕ ಅವರು ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ. ಬಿಜೆಪಿಯವರು ಪ್ರತಿನಿಧಿಸಿರುವ ವಾರ್ಡ್‌ಗಳಿಗೆ ತಲಾ ₹2 ಕೋಟಿಯಿಂದ ₹ 3 ಕೋಟಿ, ಮೇಯರ್ ಪ್ರತಿನಿಧಿಸಿರುವ ವಾರ್ಡ್‌ಗೆ ₹ 1.50 ಕೋಟಿ ನೀಡಲಾಗಿದೆ. ಆದರೆ ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳಿಗೆ ₹ 20ರಿಂದ ₹ 30 ಲಕ್ಷ ನೀಡುತ್ತಿದ್ದಾರೆ. ಇಂಥ ತಾರತಮ್ಯ ಏಕೆ’ ಎಂದು ಶನಿವಾರ
ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನಿಸಿದರು.

‘2020–22ನೇ ಸಾಲಿನಲ್ಲಿ ವರ್ಷಗಳ ಅವಧಿಯಲ್ಲಿ ₹55 ಕೋಟಿ ಟೆಂಡರ್ ಕರೆದಿದ್ದು, ಈ ಸಾಲಿನಲ್ಲಿ ₹23 ಕೋಟಿ ಸಂಗ್ರಹವಾಗಿದೆ. ₹ 22 ಕೋಟಿ ಕೊರತೆ ಇದ್ದು, ಪ್ರಸಕ್ತ ಸಾಲಿನಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಕೆಯಲ್ಲಿ ಸಾಮಾನ್ಯ ನಿಧಿಯಲ್ಲಿ ಅನುದಾನ ಲಭ್ಯವಿಲ್ಲ
ದಂತಾಗಿದೆ. ಜೆಸಿಬಿ ಯಂತ್ರಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲ
ದಂತಾಗಿದೆ’ ಎಂದು ಟೀಕಿಸಿದರು.

ADVERTISEMENT

ಮಹಾನಗರಪಾಲಿಕೆ ಸದಸ್ಯ ಎ. ನಾಗರಾಜ್, ‘15ನೇ ಹಣಕಾಸು ಯೋಜನೆಯಡಿ ₹ 25 ಕೋಟಿ ಅನುದಾನ ಬಂದು ನಾಲ್ಕು ತಿಂಗಳಾದರೂ ಸಭೆ ಕರೆದಿಲ್ಲ. ಅದಕ್ಕೊಂದು ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯುವ ಕೆಲಸವನ್ನೂ ಮಾಡಿಲ್ಲ. ಬಂದಿರುವ ಅನುದಾನ ಬಳಸಲು ಆಡಳಿತ ಪಕ್ಷದವರಿಗೆ ಕಾಳಜಿ ಇಲ್ಲ. ಪಾಲಿಕೆಯಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದ್ದು, ಒಂದು ಕೆಲಸವೂ ಆಗುತ್ತಿಲ್ಲ’ ಎಂದು ಟೀಕಿಸಿದರು.

ವಿನಾಕಾರಣ ತೊಂದರೆ: ಕೇವಲ ದಾಖಲೆ ಪರಿಶೀಲನೆಗಾಗಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಪ್ರವೀಣ್ ಸೂದ್ ಸೂಚನೆ ನೀಡಿದ್ದರೂ ಸಂಚಾರ ಪೊಲೀಸರು ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಕೆಲವು ಪೊಲೀಸರು ಸಮವಸ್ತ್ರ ಧರಿಸದೇ ಸ್ಥಳಕ್ಕೆ ಬಂದು ದಂಡ ವಿಧಿಸುತ್ತಿದ್ದಾರೆ’ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ನೀಡಬೇಕು ಎಂದು ನಾಗರಾಜ್ ಆಗ್ರಹಿಸಿದರು.

ಆಶಾ ಉಮೇಶ್, ಜಾಕೀರ್ ಅಲಿ, ಲಿಯಾಖತ್ ಅಲಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.