ದಾವಣಗೆರೆ: ನಗರದ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ಲಭ್ಯವಾಗಿದೆ. ಹೊಸ ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಮೂಲಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನಗರವನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ₹ 14 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ಇಂದಿರಾ ಕ್ಯಾಂಟೀನ್, ಬೀದಿ ದೀಪ ಉದ್ಘಾಟನೆ ಹಾಗೂ ಮಾಜಿ ಮೇಯರ್ ಭಾವಚಿತ್ರಗಳನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಅಧಿಕಾರವಧಿಯಲ್ಲಿ ದಾವಣಗೆರೆ ನಗರದ ಅಭಿವೃದ್ಧಿಗೆ ಒತ್ತು ಸಿಕ್ಕಿದೆ. ಪ್ರಮುಖ ರಸ್ತೆಗಳನ್ನು ಸಿಮೆಂಟ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರ ಮಂಜೂರು ಮಾಡಿರುವ ಅನುದಾನದಲ್ಲಿ ಹದಡಿ ರಸ್ತೆ, ಬಸಾಪುರ ರಸ್ತೆ ಹಾಗೂ ನಗರದ ಪ್ರಮುಖ ವೃತ್ತಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಲಾಗುತ್ತಿದೆ’ ಎಂದರು.
‘ರಾಜಕಾಲುವೆ ಹಾಗೂ ಒಳಚರಂಡಿ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿವೆ. ಅತಿ ಹೆಚ್ಚು ಮಳೆ ಸುರಿದರೂ ಯಾವುದೇ ತೊಂದರೆ ಆಗಿಲ್ಲ. ಮಹಾನಗರ ಪಾಲಿಕೆ ಸ್ವಚ್ಛತೆಗೆ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ. ಕಸದ ತೊಟ್ಟಿಗಳನ್ನು ಮಾರುಕಟ್ಟೆ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಇಡುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.
ಮಾಜಿ ಮೇಯರ್‌ಗಳಾದ ಎಂ.ಮಾದಮ್ಮ, ಶೋಭಾ ಪಲ್ಲಗಟ್ಟೆ, ಎಂ.ಎಸ್.ವಿಠ್ಠಲ್, ಎ.ಎನ್.ಗುರುನಾಥ್, ರೇಖಾ ನಾಗರಾಜ್, ವಿನಾಯಕ ಪೈಲ್ವಾನ್, ರೇಣುಕಾ ಬಾಯಿ, ಎಲ್.ಡಿ.ಗೋಣೇಪ್ಪ, ಅಶ್ವಿನಿ ವೇದಮೂರ್ತಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಜರಿದ್ದರು.
ಎಸ್.ಎಸ್. ಮಲ್ಲಿಕಾರ್ಜುನ್ ಈ ಹಿಂದೆ ಸಚಿವರಾಗಿದ್ದಾಗ ಹೆಚ್ಚು ಕೆಲಸ ಮಾಡಿದ್ದರು. ಆ ವೇಗ ಈಗ ಕಾಣುತ್ತಿಲ್ಲ. ಅವರು ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ.– ಕೆ.ಆರ್.ವಸಂತಕುಮಾರ್, ಮಾಜಿ ಮೇಯರ್
ಪ್ರತಿ ಜೀವವೂ ಅಮೂಲ್ಯ. ಮನುಷ್ಯರನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಬೇಕು. ಸೌಹಾರ್ದತೆಗೆ ಹೆಸರಾಗಿರುವ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು.– ಕೆ.ಚಮನ್‌ಸಾಬ್, ಮಾಜಿ ಮೇಯರ್
ಸಂಚಾರ ನಿರ್ವಹಣೆಗೆ ಅಸಮಾಧಾನ
ನಗರದಲ್ಲಿ ಸೃಷ್ಟಿಯಾಗಿರುವ ವಾಹನ ದಟ್ಟಣೆಯನ್ನು ನಿರ್ವಹಿಸುವಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಅವರು ಮಹಾನಗರ ಪಾಲಿಕೆಗೆ ಬರುವ ಮಾರ್ಗದಲ್ಲಿ ಎದುರಾದ ಸಂಚಾರ ದಟ್ಟಣೆಯಿಂದ ಸಿಡಿಮಿಡಿಗೊಂಡರು.
‘ಸಂಚಾರ ಸಮಸ್ಯೆ ತೀರಾ ಬಿಗಡಾಯಿಸಿರುವಂತೆ ಕಾಣುತ್ತಿದೆ. ರಸ್ತೆ ದಾಟಲು ಜನರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಸ್ಯೆ ಮತ್ತೆ ಸೃಷ್ಟಿಯಾಗಬಾರದು. ಸಂಚಾರ ನಿಯಮಗಳನ್ನು ಬಿಗಿಗೊಳಿಸಬೇಕು’ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಾಕೀತು ಮಾಡಿದರು.
‘ಬೆಂಕಿ ಹಚ್ಚುವವರನ್ನು ದೂರವಿಡಿ’
‘ಶಾಂತಿಪ್ರಿಯ ನಗರದಲ್ಲಿ ಗಲಾಟೆ ನಡೆಯಬಾರದು. ಸೌಹಾರ್ದತೆ ಕಾಪಾಡಲು ಎಲ್ಲರೂ ಸಹಕರಿಸಬೇಕು. ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರನ್ನು ದೂರವಿಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನವಿ ಮಾಡಿದರು. ‘ಗಲಾಟೆ ನಡೆದರೆ ರಾಜಕಾರಣಿಗಳಿಗೆ ಶ್ರೀಮಂತರಿಗೆ ತೊಂದರೆ ಆಗುವುದಿಲ್ಲ. ಬಡವರು ಸೇರಿದಂತೆ ನಿತ್ಯ ಕೂಲಿ ಕೆಲಸ ಮಾಡುವರಿಗೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸಹೋದರತೆಯಿಂದ ಬದುಕುವುದು ಮುಖ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.