ADVERTISEMENT

Davanagere Crime | ₹33 ಲಕ್ಷದ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ

ಮನೆಯ ಬೀಗ ಮುರಿದು ಕೃತ್ಯ, 332 ಗ್ರಾಂ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 6:32 IST
Last Updated 12 ಜೂನ್ 2025, 6:32 IST
ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಅಪಾರ ಪ್ರಮಾಣದ ಚಿನ್ನಾಭರಣ
ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಅಪಾರ ಪ್ರಮಾಣದ ಚಿನ್ನಾಭರಣ   

ದಾವಣಗೆರೆ: ಮನೆಯ ಬೀಗ ಮುರಿದು ₹ 33 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿಯನ್ನು ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗದ ಕವಾಡಿಗರಹಟ್ಟಿಯ ನಿವಾಸಿ ಸೈಯ್ಯದ್ ಅಕ್ಬರ್ (58) ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯಿಂದ 332 ಗ್ರಾಂ ಚಿನ್ನಾಭರಣ, 544 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ, ₹1.32 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿದ್ಯಾನಗರದ 1ನೇ ಮುಖ್ಯ ರಸ್ತೆಯ ನಿವಾಸಿ ಶಂಕರಯ್ಯ ಅವರ ಮನೆಯಲ್ಲಿ ಕಳವು ನಡೆದಿತ್ತು.

ADVERTISEMENT

ಶಂಕರಯ್ಯ ಅವರು ಮೇ 19ರಂದು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಜೂನ್‌ 6ರಂದು ಮನೆಗೆ ಮರಳಿದಾಗ ಮುಂಬಾಗಿಲು ಬೀಗ ಮುರಿದಿದ್ದು ಗಮನಕ್ಕೆ ಬಂದಿದೆ. ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಲಾಗಿತ್ತು. ಈ ಕುರಿತು ವಿದ್ಯಾನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ವಿದ್ಯಾನಗರ ಠಾಣೆಯ ಇನ್‌ಸ್ಪೆಕ್ಟರ್ ವೈ.ಎಸ್‌.ಶಿಲ್ಪಾ ನೇತೃತ್ವದ ತಂಡ ಆರೋಪಿಯನ್ನು ಜೂನ್‌ 9ರಂದು ಪತ್ತೆ ಮಾಡಿತ್ತು. 2013ರಲ್ಲಿ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ, 2020ರಲ್ಲಿ ಚಿತ್ರದುರ್ಗ ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಮೇ 19ರಿಂದ ಜೂನ್‌ 6 ನಡುವೆ ನಡೆದ ಕೃತ್ಯ ಬೀಗ ಹಾಕಿದ ಮನೆ ಹೊಂಚು ಹಾಕಿ ಕಳವು ಶಿವಮೊಗ್ಗ, ಚಿತ್ರದುರ್ಗದಲ್ಲಿ ನಡೆದ ಕೃತ್ಯ ಬಯಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.