ADVERTISEMENT

ದಾವಣಗೆರೆ ಜಿಲ್ಲಾ ಕೋವಿಡ್‌ ಕಂಟ್ರೋಲ್‌ ರೂಮ್‌ ಆರಂಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 14:26 IST
Last Updated 20 ನವೆಂಬರ್ 2020, 14:26 IST
ದಾವಣಗೆರೆಯ ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಿರುವ ಜಿಲ್ಲಾ ಕೋವಿಡ್–19 ಕಂಟ್ರೋಲ್‌ ರೂಮ್‌ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶುಕ್ರವಾರ ಉದ್ಘಾಟಿಸಿದರು.
ದಾವಣಗೆರೆಯ ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಿರುವ ಜಿಲ್ಲಾ ಕೋವಿಡ್–19 ಕಂಟ್ರೋಲ್‌ ರೂಮ್‌ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶುಕ್ರವಾರ ಉದ್ಘಾಟಿಸಿದರು.   

ದಾವಣಗೆರೆ: ‘ಕೋವಿಡ್ ರೋಗಿಗಳಿಗೆ ತ್ವರಿತವಾಗಿ, ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು, ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್‌ ರಚಿಸಲಾಗಿದ್ದು, ಇದು ರಾಜ್ಯದಲ್ಲೇ ಮಾದರಿ ಕಂಟ್ರೋಲ್ ರೂಂ ಆಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಿದ ಜಿಲ್ಲಾ ಕೋವಿಡ್–19 ಕಂಟ್ರೋಲ್‌ ರೂಮ್‌ಗೆ ಶುಕ್ರವಾರ ಚಾಲನೆ ನೀಡಿದ ಅವರು, ‘ಈ ಮೊದಲು ಕೋವಿಡ್ ಫಲಿತಾಂಶಗಳನ್ನು ದೇಶದಾದ್ಯಂತ ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಪರಿಹಾರ ಆ್ಯಪ್‌ ಮೂಲಕ ಜಿಲ್ಲೆಗಳು ಐಸಿಎಂಆರ್‌ನಿಂದ ಮಾಹಿತಿ ಪಡೆದು ತಾಲ್ಲೂಕುವಾರು ಲೈನ್‌ಲೀಸ್ಟ್‌ ಮಾಡಲಾಗುತ್ತಿತ್ತು. ಲೈನ್‌ಲಿಸ್ಟ್‌ ಆ್ಯಪ್‌ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆ್ಯಪ್‌ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಈಗ ಆ್ಯಪ್‌ಗಳನ್ನು ವಿಲೀನಗೊಳಿಸಿ ಒಂದೇ ಲೈನ್‌ಲಿಸ್ಟ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಕಂಟ್ರೋಲ್ ರೂಮ್‌ನಿಂದ ಅದು ಕಾರ್ಯನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.

ಕಂಟ್ರೋಲ್‌ ರೂಮ್‌ನಲ್ಲಿ ಎಂಟು ವಿಭಾಗಗಳಿವೆ. ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿ ತ್ವರಿತವಾಗಿ ಚಿಕಿತ್ಸೆಗೆ ಸ್ಪಂದಿಸಲಿವೆ. ರಾಜ್ಯ ವಾರ್‌ರೂಮ್‌ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಮ್‌ನಿಂದ ಪ್ರತಿ ದಿನ ವೀಕ್ಷಿಸಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ರೋಗಿಯ ಲಕ್ಷಣಗಳು, ಇತರೆ ವಿವರಗಳ ಮಾಹಿತಿ ಪಡೆದು ಕಂಟ್ರೋಲ್ ರೂಂನ ಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು ಎಂದು ಹೇಳಿದರು.

ADVERTISEMENT

ಸರ್ಕಾರಿ ಆಸ್ಪತ್ರೆ ಸೇವೆ, ಕೋವಿಡ್ ಕೇರ್ ಸೆಂಟರ್, ಹೋಂ ಐಸೊಲೇಷನ್, ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಂಬುಲೆನ್ಸ್, ಖಾಸಗಿ ಆಸ್ಪತ್ರೆ, ಈಗಾಗಲೇ ಆಸ್ಪತ್ರೆಯಲ್ಲಿರುವವರು, ಅನ್‌ ರೆಸ್ಪಾನ್ಸಿವ್‌ ಪ್ರಕರಣ, ಐಸಿಎಂಆರ್ ಲೀಸ್ಟ್‌ ವಿಭಾಗಗಳು ಕಂಟ್ರೋಲ್‌ ರೂಮ್‌ನಲ್ಲಿ ಕೆಲಸ ಮಾಡಲಿವೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ‘ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಅವರನ್ನು ಕಂಟ್ರೋಲ್ ರೂಂ ನೋಡಲ್‌ ಅಧಿಕಾರಿಯಾಗಿ ಹಾಗೂ ಮೇಲ್ವಿಚಾರಣೆಗಾಗಿ ವೈದ್ಯಾಧಿಕಾರಿಗಳಾದ ಡಾ.ರುದ್ರೇಶ್ ಎಸ್., ಡಾ.ಹೇಮಂತ್‌ಕುಮಾರ್‌ ಕೆ., ಡಾ.ನೇತಾಜಿ ಅವರನ್ನು ನಿಯೋಜಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್ ನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಎಚ್‌ಒ ಡಾ.ನಾಗರಾಜ್, ಡಾ.ನಟರಾಜ್, ಡಾ.ಯತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.