ADVERTISEMENT

ಜಗಳೂರು: 'ಅಲೆಮಾರಿ ಕುಟುಂಬಗಳಿಗೆ ಸೂರು ನಿರ್ಮಾಣಕ್ಕೆ ಕ್ರಮ'

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:12 IST
Last Updated 28 ಜೂನ್ 2025, 16:12 IST
ಜಗಳೂರಿನಲ್ಲಿ ಅಲೆಮಾರಿ ಹಾಗೂ   ಅರೆ ಅಲೆಮಾರಿ ಕುಟುಂಬಗಳು ವಾಸಿಸುವ ಪ್ರದೇಶಕ್ಕೆ  ಶನಿವಾರ ಅಲೆಮಾರಿ ಅಭಿವೃದ್ದಿ ನಿಗಮದ ಎಂ.ಡಿ. ಮಲ್ಲಿಕಾರ್ಜುನ್ ಅವರು ಭೇಟಿ  ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.
ಜಗಳೂರಿನಲ್ಲಿ ಅಲೆಮಾರಿ ಹಾಗೂ   ಅರೆ ಅಲೆಮಾರಿ ಕುಟುಂಬಗಳು ವಾಸಿಸುವ ಪ್ರದೇಶಕ್ಕೆ  ಶನಿವಾರ ಅಲೆಮಾರಿ ಅಭಿವೃದ್ದಿ ನಿಗಮದ ಎಂ.ಡಿ. ಮಲ್ಲಿಕಾರ್ಜುನ್ ಅವರು ಭೇಟಿ  ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.   

ಜಗಳೂರು: ತಾಲ್ಲೂಕಿನ ವಿವಿಧೆಡೆ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರಿಗೆ ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ತಾಡಪಾಲು ಮತ್ತು ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಲಾಗುವುದು ಎಂದು ಕರ್ನಾಟಕ ಎಸ್.ಸಿ, ಎಸ್.ಟಿ. ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಮಹಾತ್ಮಗಾಂಧಿ ಹೊಸಬಸ್ ನಿಲ್ದಾಣ, ಅಶ್ವತ್ಥರೆಡ್ಡಿ ಬಡಾವಣೆಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ನಿರಾಶ್ರಿತ ಎಸ್.ಸಿ, ಎಸ್.ಟಿ. ಸಮುದಾಯದ 45 ಅರೆಅಲೆಮಾರಿ ಕುಟುಂಬಗಳಿಗೆ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಪ್ರಾಧಿಕಾರಗಳಿಂದ ಭೂಮಿ ನೀಡಿದಲ್ಲಿ ಅಭಿವೃದ್ಧಿ ನಿಗಮದಿಂದ ಪಟ್ಟಣದ ನಿವೇಶನಗಳು ಮತ್ತು ಮನೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ನಿಗಮದಿಂದ ಉದ್ಯಮಶೀಲತೆ ಯೋಜನೆಗಳಡಿ ಸಾಲಸೌಲಭ್ಯ, ಸಹಾಯಧನ ಮತ್ತು ಸಮುದಾಯದ ಮಕ್ಕಳಿಗೆ ವಸತಿ ಶಾಲೆಗಳ ಪ್ರವೇಶಕ್ಕೆ ವಿಶೇಷವಾಗಿ ಶೇ.10 ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಮುದಾಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಕೊರಚ ಸಮಾಜದ ಜಿಲ್ಲಾ ಕಾರ್ಯದರ್ಶಿ ಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿ ಮೋದಿನ್, ನಾಮನಿರ್ದೇಶಿತ ಸದಸ್ಯ ಕುರಿ ಜಯ್ಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT