ಜಗಳೂರು: ತಾಲ್ಲೂಕಿನಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದ್ದು, ಪ್ರಸ್ತುತ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.
ತಾಲ್ಲೂಕಿನ ಕಸಬಾ, ಬಿಳಿಚೋಡು ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಹದವಾದ ಮಳೆ ಬಿದ್ದಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.
ವಾಡಿಕೆಗಿಂತ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿದ್ದು, ರೈತಾಪಿ ಸಮುದಾಯದಲ್ಲಿ ಈ ಬಾರಿಯ ಮುಂಗಾರು ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.
ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 126.7 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿದ್ದು, ಇದುವರೆಗೆ 245 ಮಿ.ಮೀ ಮಳೆಯಾಗಿದೆ. ಇದು ಶೇ 95ರಷ್ಟು ಹೆಚ್ಚಾಗಿದೆ.
‘ಜಿಲ್ಲೆಯಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. 54,000 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರದೇಶ ಇದ್ದು, ಈಗಾಗಲೇ 15,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದೆ. ಉಳಿದಂತೆ ಜೋಳ, ತೊಗರಿ, ಸೂರ್ಯಕಾಂತಿ, ರಾಗಿ ಮುಂತಾದ ಬೆಳೆಗಳ ಬಿತ್ತನೆ ಭರದಿಂದ ಸಾಗಿದೆ.
8 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ:
‘ಮುಂಗಾರು ಹಂಗಾಮಿಗೆ ಅಂದಾಜು 8,000 ಕ್ವಿಂಟಲ್ ಬಿತ್ತನೆ ಬೀಜದ ಅಗತ್ಯ ಇದ್ದು, ಎಲ್ಲ ರೀತಿಯ ಬಿತ್ತನೆ ಬೀಜದ ದಾಸ್ತಾನು ಇದೆ. ಬಿತ್ತನೆ ಬೀಜವನ್ನು ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ 3 ರೈತಸಂಪರ್ಕ ಕೇಂದ್ರಗಳ ವ್ಯಾಪ್ತಿಯ ಜಗಳೂರು ಪಟ್ಟಣ, ಹೊಸಕೆರೆ, ಬಿಳಿಚೋಡು, ಅಣಬೂರು, ಕೆಚ್ಚೇನಹಳ್ಳಿ, ಬಸವನಕೋಟೆ, ಸೊಕ್ಕೆ ಮತ್ತು ಬಿದರಕೆರೆ ಗ್ರಾಮಗಳಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದ ಬಿತ್ತನೆಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ರಸಗೊಬ್ಬರದ ಕೊರತೆ ಇಲ್ಲ:
ತಾಲ್ಲೂಕಿನಲ್ಲಿ ಡಿಎಪಿ ಸೇರಿದಂತೆ ಎಲ್ಲ ರೀತಿಯ ರಸಗೊಬ್ಬರದ ದಾಸ್ತಾನು ಇದ್ದು, ಕೊರತೆಯಾಗಿಲ್ಲ. 8,632 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಎನ್.ಪಿ.ಕೆ, ಯೂರಿಯಾ, ಪೊಟ್ಯಾಷ್ ಮತ್ತು ಡಿಎಪಿ ದಾಸ್ತಾನು ಇದೆ. ಸಹಕಾರ ಸಂಘಗಳು ಮತ್ತು ಖಾಸಗಿ ಡೀಲರ್‌ಗಳ ಮೂಲಕ ರೈತರಿಂದ ಆಧಾರ್ ಕಾರ್ಡ್, ಪಹಣಿ ಪಡೆದು ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೊಟ್ಯಾಷ್ ಬಳಕೆ ಇರಲಿ:
‘ಮಣ್ಣಿನಲ್ಲಿ ಎನ್.ಪಿ.ಕೆ. ಅನುಪಾತ 4:2:1 ಇರಬೇಕಿದ್ದು, ಬಹುತೇಕ ಕಡೆ ವ್ಯತ್ಯಾಸ ಇದೆ. ಅಸಮತೋಲಿತ ಅನುಪಾತದಿಂದ ಮಣ್ಣಿನ ಗುಣಧರ್ಮ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅನುಪಾತ ಸರಿದೂಗಿಸಲು ಪೊಟ್ಯಾಷ್‌ಯುಕ್ತ ಗೊಬ್ಬರ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ರಸಗೊಬ್ಬರ ಬಳಕೆಯನ್ನು ಶೇ 20ಕ್ಕೆ ಕಡಿತಗೊಳಿಸಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ದ್ರವರೂಪದ ಮೇಲುಗೊಬ್ಬರವನ್ನು ಬೆಳೆಗಳಿಗೆ ಸಿಂಪಡಣೆ ಮಾಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ಅಂಕಿ ಅಂಶ * ಶೇ 95 ವಾಡಿಕೆಗಿಂತ ಹೆಚ್ಚು ಸುರಿದ ಮಳೆ * 8 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ * 8,632 ಮೆಟ್ರಿಕ್ ಟನ್ ತಾಲ್ಲೂಕಿನಲ್ಲಿ ರಸಗೊಬ್ಬರಕ್ಕೆ ಬೇಡಿಕೆ * 8,000 ಕ್ವಿಂಟಲ್ ತಾಲ್ಲೂಕಿನಲ್ಲಿ ಬಿತ್ತನೆ ಬೀಜ ವಿತರಣೆ
‘ಕಳಪೆ ಬಿತ್ತನೆಬೀಜ ಪೂರೈಸದಂತೆ ಎಚ್ಚರವಹಿಸಿ’ ‘ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಅಂಗಡಿಗಳಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ರೈತರಿಗೆ ನಕಲಿ ಬೀಜ ಪೂರೈಕೆ ಆಗದಂತೆ ತಡೆಗಟ್ಟಿ ಗುಣಮಟ್ಟದ ಬೀಜ ಪೂರೈಕೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗಬಾರದು. ಗುಣಮಟ್ಟದ ಬಗ್ಗೆ ರೈತರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಯಾವುದೇ ಲೋಪವಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.