ADVERTISEMENT

ದಾವಣಗೆರೆ: ಸಿಮೆಂಟ್‌, ಜೆಲ್ಲಿ, ಮರಳು ದರ ಕಡಿಮೆಗೊಳಿಸಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:58 IST
Last Updated 11 ಜೂನ್ 2020, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಕೊರೊನಾ ಹಿನ್ನೆಲೆಯಲ್ಲಿ ವಿಧಿಸಿದ್ದ ಲಾಕ್‌ಡೌನ್‌ಗಿಂತ ಮುಂಚೆ ಕಡಿಮೆ ಇದ್ದ ಸಿಮೆಂಟ್, ಜೆಲ್ಲಿ, ಮರಳಿನ ದರ ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆ ಏಕಾಏಕಿ ಹೆಚ್ಚಳವಾಗಿದ್ದು, ಗುತ್ತಿಗೆದಾರರಿಗೆ ತೊಂದರೆಯಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್‌. ಜಯಣ್ಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲು 20 ಎಂ.ಎಂ. ಜೆಲ್ಲಿ ಒಂದು ಅಡಿಗೆ ₹ 28, 40 ಎಂ.ಎಂ ಜೆಲ್ಲಿಗೆ ₹ 25 ಇತ್ತು. ಈಗ ಕ್ರಮವಾಗಿ ₹ 50, ₹ 40 ಇದೆ. ಎಂ. ಸ್ಯಾಂಡ್‌ ಮರಳು ಟನ್‌ಗೆ ₹ 850ರಿಂದ ₹ 900 ಇದ್ದುದು ₹ 1200ಕ್ಕೆ ಏರಿಕೆಯಾಗಿದೆ. ಸಿಮೆಂಟ್‌ ₹ 300 ಇದ್ದುದು ₹ 430ಕ್ಕೆ ಏರಿಕೆಯಾಗಿದೆ. ಇದರಿಂದ ಕಾಮಗಾರಿ ನಡೆಸಲು ಕಷ್ಟವಾಗಿದೆ’ ಎಂದು ಹೇಳಿದರು.

ಏಕಾಏಕಿ ದರ ಹೆಚ್ಚಳ ಮಾಡಿದ ಸಂಬಂಧ ಪ್ರಶ್ನಿಸಿದರೆ ಕ್ರಷರ್‌ ಮಾಲೀಕರು, ಸಿಮೆಂಟ್‌ ಕಂಪನಿ ವಿತರಕರು ರಾಜಧನ, ಲಾಕ್‌ಡೌನ್‌ ನೆಪ ಹೇಳುತ್ತಿದ್ದಾರೆ.ಶೀಘ್ರ ಸಭೆ ನಡೆಸಿ ಹಿಂದಿನ ದರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಇದರಿಂದ ಜನ ಸಾಮಾನ್ಯರಿಗೂ ತೊಂದರೆಯಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಕ್ರಷರ್‌ ಮಾಲೀಕರು, ಸಿಮೆಂಟ್‌ ಕಂಪನಿ ವಿತರಕರರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಖಜಾನೆ–2 ಹಾಗೂ 14ನೇ ಹಣಕಾಸಿನ ಆರ್‌ಎಂಸಿ ಕಾಮಗಾರಿಯನ್ನು ಸರ್ಕಾರ ತಡೆಹಿಡಿದಿರುವುದರಿಂದ ನಗದು ಪಾವತಿ ಆಗುತ್ತಿಲ್ಲ. ಈ ಬಗ್ಗೆಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಂಘದ ರಾಮಣ್ಣ, ರಾಜಣ್ಣ, ಎಚ್‌. ಚಂದ್ರಪ್ಪ, ಪರಮೇಶ್ವರಪ್ಪ, ರುದ್ರೇಶ್, ಡಿ. ದೇವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.