ADVERTISEMENT

ದಾವಣಗೆರೆ ಜಿಲ್ಲೆಗೆ ಮೂರು ಪೊಲೀಸ್‌ ಠಾಣೆಗೆ ಪ್ರಸ್ತಾವ

ಜಿ.ಬಿ.ನಾಗರಾಜ್
Published 21 ಆಗಸ್ಟ್ 2025, 6:42 IST
Last Updated 21 ಆಗಸ್ಟ್ 2025, 6:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಜಿಲ್ಲೆಯಲ್ಲಿ ಮೂರು ಹೊಸ ಪೊಲೀಸ್‌ ಠಾಣೆ ತೆರೆಯುವಂತೆ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸರ್ಕಾರದ ಅನುಮೋದನೆ ದೊರಕಿದರೆ ಠಾಣೆ ಸ್ಥಾಪನೆಯ ಪ್ರಕ್ರಿಯೆ ಆರಂಭಗೊಳ್ಳಲಿದೆ.

ದಾವಣಗೆರೆ ತಾಲ್ಲೂಕಿನ ಆನಗೋಡು ಹಾಗೂ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆಯ ಪೊಲೀಸ್ ಠಾಣೆ ಮತ್ತು ಹರಿಹರದಲ್ಲಿ ಸಂಚಾರ ಪೊಲೀಸ್‌ ಠಾಣೆ ತೆರೆಯುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಗೃಹ ಇಲಾಖೆಯನ್ನು ಕೋರಿದ್ದಾರೆ.

ಕಾನೂನು ಸುವ್ಯವಸ್ಥೆ, ಸಂಚಾರ, ಮಹಿಳಾ, ‘ಸೆನ್‌’ (ಆರ್ಥಿಕ, ಸೈಬರ್‌ ಹಾಗೂ ಮಾದಕ ವಸ್ತು ನಿಯಂತ್ರಣ) ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸೇರಿ ಜಿಲ್ಲೆಯಲ್ಲಿ 25 ಪೊಲೀಸ್‌ ಠಾಣೆಗಳಿವೆ. ದಾವಣಗೆರೆ ನಗರ ಹೊರತುಪಡಿಸಿದರೆ ಉಳಿದೆಡೆ ಸಂಚಾರ ಠಾಣೆಗಳಿಲ್ಲ.

ADVERTISEMENT

ಹೊಸ ಪೊಲೀಸ್‌ ಠಾಣೆಗಳನ್ನು ತೆರೆಯುವ ಸಂಬಂಧ ರಾಷ್ಟ್ರೀಯ ಪೊಲೀಸ್ ಆಯೋಗ ಮಾನದಂಡಗಳನ್ನು ನಿಗದಿಪಡಿಸಿದೆ. 50,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ, ವಾರ್ಷಿಕ 400ಕ್ಕೂ ಅಧಿಕ ಅಪರಾಧ ಪ್ರಕರಣ ದಾಖಲಾಗುವ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ಹೊಸ ಪೊಲೀಸ್‌ ಠಾಣೆ ಹಾಗೂ ವಾರ್ಷಿಕ ಸರಾಸರಿ 150 ಅಪಘಾತ ಪ್ರಕರಣ ದಾಖಲಾಗುವ ಸ್ಥಳದಲ್ಲಿ ಸಂಚಾರ ಪೊಲೀಸ್‌ ಠಾಣೆ ತೆರೆಯಬಹುದಾಗಿದೆ.

‘ಜನಸಂಖ್ಯೆ, ದಾಖಲಾಗುವ ಪ್ರಕರಣಗಳ ಸಂಖ್ಯೆ ಹಾಗೂ ಠಾಣೆಯ ಕಾರ್ಯವ್ಯಾಪ್ತಿ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇರೆಗೆ ಹೊಸ ಪೊಲೀಸ್‌ ಠಾಣೆಗೆ ಕೋರಿಕೆ ಸಲ್ಲಿಸಬಹುದಾಗಿದೆ. ಅತಿ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದಲೂ ನೂತನ ಠಾಣೆ ಕಾರ್ಯಾರಂಭಕ್ಕೆ ಅವಕಾಶವಿದೆ. ಹೀಗಾಗಿ, ಒಂದು ಸಂಚಾರ ಹಾಗೂ ಎರಡು ಕಾನೂನು ಸುವ್ಯವಸ್ಥೆಯ ಪೊಲೀಸ್‌ ಠಾಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಾವಣಗೆರೆ ತಾಲ್ಲೂಕಿನ ಆನಗೋಡು ಭಾಗವು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರಿದೆ. ಈ ಠಾಣೆ ವ್ಯಾಪ್ತಿಯಲ್ಲಿ 84 ಹಳ್ಳಿಗಳಿವೆ. ವಾರ್ಷಿಕ ಸರಾಸರಿ 400ಕ್ಕೂ ಅಧಿಕ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗುತ್ತಿವೆ. ಈ ಎಲ್ಲ ಹಳ್ಳಿಗಳ ಮೇಲೆ ನಿಗಾ ಇಡುವುದು ಪೊಲೀಸರಿಗೆ ಸವಾಲಾಗಿದೆ.

‘ಆನಗೋಡು ಠಾಣೆಯ ಪ್ರಸ್ತಾವಕ್ಕೆ ಗೃಹ ಇಲಾಖೆ ಪೂರಕವಾಗಿ ಸ್ಪಂದಿಸಿದೆ. ಠಾಣೆಯ ಕಾರ್ಯವ್ಯಾಪ್ತಿ, ಸಿಬ್ಬಂದಿ ನಿಯೋಜನೆ ಸೇರಿ ಹಲವು ಮಾಹಿತಿಗಳನ್ನು ಕೋರಿದೆ. ವಿವರವಾದ ವರದಿ ಸಲ್ಲಿಸಿದ ಬಳಿಕ ಆರ್ಥಿಕ ಇಲಾಖೆಯ ಅನುಮೋದನೆ ಸಿಗುವ ನಿರೀಕ್ಷೆ ಇದೆ’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ವಿವರಿಸಿವೆ.

ಜಿಲ್ಲೆಯಲ್ಲಿ ಮೂರು ಹೊಸ ಪೊಲೀಸ್‌ ಠಾಣೆ ತೆರೆಯುವ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗಲಿದೆ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಚನ್ನಗಿರಿ ಠಾಣೆ ವ್ಯಾಪ್ತಿಯಲ್ಲಿವೆ 127 ಹಳ್ಳಿ

ಚನ್ನಗಿರಿ ಠಾಣೆಯ ವ್ಯಾಪ್ತಿಯಲ್ಲಿ ಪಟ್ಟಣ ಹಾಗೂ 127 ಹಳ್ಳಿಗಳಿವೆ. ವಾರ್ಷಿಕ ಸರಾಸರಿ 800ಕ್ಕೂ ಅಧಿಕ ಎಫ್‌ಐಆರ್‌ಗಳು ದಾಖಲಾಗುತ್ತಿವೆ. ಹೀಗಾಗಿ ನಲ್ಲೂರು ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆಯ ಅಗತ್ಯವಿದೆ ಎಂಬುದನ್ನು ಪ್ರಸ್ತಾವದಲ್ಲಿ ವಿವರಿಸಲಾಗಿದೆ. ‘ಚನ್ನಗಿರಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಿಗೆ ಒಂದೇ ಠಾಣೆ ಇದೆ. ಇದರ ಕಾರ್ಯವ್ಯಾಪ್ತಿ ದೊಡ್ಡದಾಗಿದ್ದು ಪ್ರತಿ ಹಳ್ಳಿಯ ಮೇಲೆ ನಿಗಾ ಇಡುವುದು ಸವಾಲಾಗಿದೆ. ಇದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹೊಸ ಪೊಲೀಸ್‌ ಠಾಣೆಯ ಅಗತ್ಯವಿದೆ’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಸಂಚಾರ ಠಾಣೆ: ದಶಕದ ಬೇಡಿಕೆ

ಜಿಲ್ಲೆಯಲ್ಲಿ ದಾವಣಗೆರೆ ಹೊರತುಪಡಿಸಿದರೆ ಹರಿಹರ 2ನೇ ದೊಡ್ಡ ನಗರ. ಕರ್ನಾಟಕದ ನಾಲ್ಕು ಭಾಗಗಳನ್ನು ಸಂಪರ್ಕಿಸುವ ಹರಿಹರದಲ್ಲಿ ಸಂಚಾರ ಠಾಣೆ ತೆರೆಯುವ ಬೇಡಿಕೆ ದಶಕಗಳಿಂದ ಇದೆ. ‘ಹೊಸಪೇಟೆ–ಶಿವಮೊಗ್ಗ ಹಾಗೂ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗಳು ಹರಿಹರ ನಗರದಲ್ಲಿ ಹಾದು ಹೋಗಿವೆ. ನಗರದ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–48 ಇದೆ. ನಿತ್ಯ ಸರಾಸರಿ 1450ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಹರಿಹರದ ಮೂಲಕ ಹಾದು ಹೋಗುತ್ತವೆ. ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಗಾಂಧಿ ವೃತ್ತದಲ್ಲಿ ಟ್ರಾ‍ಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಠಾಣೆಯ ಅಗತ್ಯವಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್‌ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.