ADVERTISEMENT

ಅಂಗಾಂಗ ದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಪಾಲಕರು

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:37 IST
Last Updated 30 ಮೇ 2025, 16:37 IST
ಸಿ.ಮಂಜುನಾಥ
ಸಿ.ಮಂಜುನಾಥ   

ಮಾದಾಪುರ (ನ್ಯಾಮತಿ): ಪುತ್ರನ ಸಾವಿನ ನಂತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪಾಲಕರು ತಮ್ಮ ಮಗನನ್ನು ಕಳೆದುಕೊಂಡ ನೋವಿನಲ್ಲೂ ಸಾರ್ಥಕ್ಯ ಕಂಡ ಅಪರೂಪದ ಘಟನೆ ನ್ಯಾಮತಿ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರಪ್ಪ ಮತ್ತು ಸಾಕಮ್ಮ ದಂಪತಿಯ ಹಿರಿಯ ಪುತ್ರ ಸಿ.ಮಂಜುನಾಥ (25) ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು. ಈಚೆಗೆ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಂಜುನಾಥ ಅವರು ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. 

ಮಿದುಳು ನಿಷ್ಕ್ರಿಯಗೊಂಡು ಮಂಜುನಾಥ ಅವರು ಗುರುವಾರ ಆಸ್ಪತ್ರೆಯಲ್ಲಿ ನಿಧನರಾದರು. ಮಗನ ಹೃದಯ, ಮೂತ್ರಪಿಂಡ, ಲಿವರ್, ಕಾರ್ನಿಯಾಗಳನ್ನು ದಾನ ಮಾಡಲು ತೀರ್ಮಾನಿಸಿದರು. ಈ ಮೂಲಕ ಅಂಗಾಂಗ ಕಸಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾದರು. ಮಗನ ಸಾವಿನ ದುಃಖದಲ್ಲೂ, ಸಾವನ್ನು ಸಾರ್ಥಕವಾಗಿಸಿದ ತಂದೆ–ತಾಯಿಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. 

ADVERTISEMENT

ಬೆಂಗಳೂರಿನ ಆರೋಗ್ಯ ಇಲಾಖೆಯ ಜೀವ ಸಾಕ್ಷರತಾ ಸಂಸ್ಥೆಗೆ ಅಂಗಾಂಗಳನ್ನು ಪಡೆಯಲು ಅನುಮತಿ ನೀಡಲಾಯಿತು. ಅಂಗಾಂಗಳನ್ನು ಪಡೆದಿರುವ ಬಗ್ಗೆ ಪಾಲಕರಿಗೆ ದೃಢೀಕರಣ ಪತ್ರವನ್ನು ನೀಡಲಾಗಿದೆ. ಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.