ಸಂತೇಬೆನ್ನೂರು: ಈ ಬಾರಿಯ ಸಮೃದ್ಧ ಮುಂಗಾರು, ಮುಂದುವರಿದ ಹಿಂಗಾರು ರೈತರ ಕೃಷಿ ಕಾಯಕವನ್ನು ಚುರುಕುಗೊಳಿಸಿದೆ.
ಪಾಪ್‌ಕಾರ್ನ್ ಮೆಕ್ಕಜೋಳ ಬೆಳೆದ ರೈತರು, ಅದರ ಕೊಯ್ಲಿನ ನಂತರ ಹಿಂಗಾರು ಬೆಳೆ ಅಲಸಂದೆ ಬಿತ್ತನೆ ಮಾಡಿದ್ದರು. ಅಲ್ಪಾವಧಿಯ ದ್ವಿದಳ ಧಾನ್ಯ ಅಲಸಂದೆ ಒಕ್ಕಣೆ ಬಿರುಸಿನಿಂದ ಸಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 1,100 ಹೆಕ್ಟೇರ್‌ನಲ್ಲಿ ಅಲಸಂದೆ ಬೆಳೆಯಲಾಗಿದೆ.
ಅಕ್ಟೋಬರ್ ಆರಂಭದಿಂದ ನವೆಂಬರ್ ಮಧ್ಯಭಾಗದವರೆಗೆ ವಿವಿಧ ಹಂತಗಳಲ್ಲಿ ಅಲಸಂದೆ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಪ್ರತಿ ಕ್ವಿಂಟಲ್ ಧಾರಣೆ ₹ 9000 ಇತ್ತು. ಸದ್ಯ ₹ 8,300ರ ಆಸುಪಾಸಿನಲ್ಲಿ ಖರೀದಿ ನಡೆದಿದೆ.
ಸಂತೇಬೆನ್ನೂರು, ಗೆದ್ದಲಹಟ್ಟಿ, ಚಿಕ್ಕಬ್ಬಿಗೆರೆ, ಕುಳೇನೂರು, ಚಿಕ್ಕಬೆನ್ನೂರು ಸೇರಿ ಹಲವು ಗ್ರಾಮಗಳಲ್ಲಿ ಅಲಸಂದೆಯನ್ನು ಪ್ರಮುಖವಾಗಿ ಬೆಳೆಯಲಾಗಿದೆ. ಪ್ರತಿ ಎಕರೆಗೆ 3ರಿಂದ 5 ಕ್ವಿಂಟಲ್ ಇಳುವರಿ ಬಂದಿದೆ. ಬೀಜ, ಗೊಬ್ಬರ, ಔಷಧ ಸಿಂಪಡಣೆ, ಉಳುಮೆ, ಕೊಯ್ಲಿಗೆ ಪ್ರತಿ ಎಕರೆಗೆ ₹ 10,000ದಿಂದ ₹ 12,000 ಖರ್ಚು ತಗುಲಿದೆ. ಮಳೆ ಹೆಚ್ಚಿದ ಕಾರಣ ಮುಂಚಿತವಾಗಿ ಬಿತ್ತನೆ ಮಾಡಿದ ರೈತರಿಗೆ ಇಳುವರಿ ಕುಸಿದಿದೆ ಎನ್ನುತ್ತಾರೆ ರೈತರು.
‘ಸದ್ಯ ಹೋಬಳಿ ವ್ಯಾಪ್ತಿಯಲ್ಲಿ ಅಲಸಂದೆ ಕೊಯ್ಲು ಭರದಿಂದ ಸಾಗಿದೆ. ಪ್ರತಿ ದಿನ 160ರಿಂದ 170 ಕ್ವಿಂಟಲ್ ಬೆಳೆ ಖರೀದಿ ಮಾಡಲಾಗುತ್ತಿದೆ. ಜನವರಿ ಅಂತ್ಯದವರೆಗೆ ಅಲಸಂದೆ ಒಕ್ಕಣೆ ನಡೆಯಲಿದೆ. ನಿತ್ಯ 80ರಿಂದ 90 ಕ್ವಿಂಟಲ್ ಖರೀದಿಸುತ್ತೇನೆ. ಹೆಚ್ಚುವರಿ ಅಲಸಂದೆಯನ್ನು ಮೈಸೂರು ಮಾರುಕಟ್ಟೆಗೆ ರವಾನಿಸುತ್ತೇವೆ’ ಎನ್ನುತ್ತಾರೆ ಖರೀದಿದಾರ ಸದಾಶಿವ.
ಸರ್ಚ್ ಲೈಟ್ ಬಳಕೆ:
ಕೊಯ್ಲು ತಡವಾದರೆ ಕಾಳು ಉದುರುವ ಭೀತಿಯಲ್ಲಿ ರಾತ್ರಿ ವೇಳೆಯಲ್ಲೂ ರೈತರು ಕೊಯ್ಲು ಮುಂದುವರಿಸಿದ್ದಾರೆ. ಅದಕ್ಕಾಗಿ ಸರ್ಚ್ ಲೈಟ್ ಬಳಸಲಾಗುತ್ತದೆ. ಹಣೆಗೆ ಸರ್ಚ್ ಲೈಟ್ ಧರಿಸಿ ರಾತ್ರಿ ವೇಳೆಯಲ್ಲೂ ಕಾರ್ಮಿಕರು ಅಲಸಂದೆ ಕೊಯ್ಯುತ್ತಾರೆ.
‘ಸಂಜೆ 4ರಿಂದ ರಾತ್ರಿ 11ರವರೆಗೆ, ಮುಂಜಾನೆ 3.30ರಿಂದ ಬೆಳಿಗ್ಗೆ 10ರವರೆಗೆ ಕೊಯ್ಲು ನಡೆಸುತ್ತಾರೆ. ಗೆದ್ದಲಹಟ್ಟಿ ಗ್ರಾಮದಲ್ಲಿ 10 ಜನರ ಮೂರು ತಂಡಗಳು ಸರ್ಚ್ ಲೈಟ್ ಬಳಸಿ ಕೊಯ್ಲು ಕಾರ್ಯ ಕೈಗೊಳ್ಳುತ್ತಾರೆ’ ಎನ್ನುತ್ತಾರೆ ಗೆದ್ದಲಹಟ್ಟಿ ರೈತ ಮಂಜುನಾಥ್.
‘ಅಲಸಂದೆ ಕೊಯ್ಲಿಗೆ ಒಮ್ಮೆಲೆ ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಸ್ವಂತ ಖರ್ಚಿನಲ್ಲಿ ₹ 300 ಭರಿಸಿ ಸರ್ಚ್ ಲೈಟ್ ಖರೀದಿಸಿದ್ದೇವೆ. ರಾತ್ರಿ ವೇಳೆ ಸ್ವಷ್ಟ ಬೆಳಕು ಮೂಡುವುದರಿಂದ ಕೆಲಸ ಸಾಗುತ್ತದೆ. ವಿಷ ಜಂತುಗಳ ಭಯವೂ ಇರದು’ ಎನ್ನುತ್ತಾರೆ ಕೃಷಿ ಕಾರ್ಮಿಕರಾದ ರೇಣುಕಮ್ಮ.
‘ದ್ವಿದಳ ಧಾನ್ಯ ಬೆಳೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಪೂರಕ ಆದಾಯವೂ ಸಿಗಲಿದೆ. ಕೊಯ್ಲಿಗೆ ಆಧುನಿಕ ಉಪಕರಣಗಳು ರೈತರಿಗೆ ವರ ಇದ್ದಂತೆ. ಹೊಟ್ಟು ತೂರಲು ರೈತರು ಫ್ಯಾನ್‌ಗಳನ್ನು ಬಳಸುತ್ತಿದ್ದಾರೆ. ಕೆಲ ರೈತರು ಪ್ರತಿ ಎಕರೆಗೆ 6 ಕ್ವಿಂಟಲ್‌ವರೆಗೆ ಇಳುವರಿ ತೆಗೆದಿದ್ದಾರೆ’ ಎನ್ನುತ್ತಾರೆ ರೈತರಾದ ಮಂಜು, ಹಾಲೇಶ್.
ಈ ಭಾಗದಲ್ಲಿ ಒಂದೇ ಹಂಗಾಮಿನಲ್ಲಿ ಎರಡು ಬೆಳೆ ಬೆಳೆಯಲಾಗಿದೆ. ಮುಂಗಾರಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ಪಾಪ್‌ಕಾರ್ನ್ ಬೆಳೆಯಲಾಗಿತ್ತು. ಕೊಯ್ಲಿನ ನಂತರ ಅಲಸಂದೆ ಬೆಳೆ ಕೈ ಹಿಡಿದಿದೆಮೆಹತಬ್ ಅಲಿ ಸಹಾಯಕ ಕೃಷಿ ಅಧಿಕಾರಿ
ಅಲಸಂದೆಗೆ ಪ್ರಮುಖವಾಗಿ ತಮಿಳುನಾಡು ಕೇರಳಗಳಲ್ಲಿ ಬಹು ಬೇಡಿಕೆ ಇದೆ. ಓಣಂನಲ್ಲಿ ಪೊಂಗಲ್ ತಯಾರಿಸಲು ಪ್ರಮುಖ ಧಾನ್ಯ ಅಲಸಂದೆ. ಅಲ್ಲದೆ ಇತರೆ ಆಹಾರಗಳಿಗೂ ಬಳಕೆ ಆಗುತ್ತಿದೆಕೆ.ಏಜಾಜ್ ಅಹಮದ್ ದಲ್ಲಾಳಿ ವರ್ತಕ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.