ADVERTISEMENT

44 ವಿದ್ಯಾರ್ಥಿಗಳಿಗೆ 74 ಸ್ವರ್ಣ ಪದಕ

ದಾವಣಗೆರೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಇಂದು * ಸಂಸದ ಸಿದ್ದೇಶ್ವರಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 14:54 IST
Last Updated 7 ಏಪ್ರಿಲ್ 2021, 14:54 IST
ಎಸ್.ಎನ್. ಮೇಘಾ
ಎಸ್.ಎನ್. ಮೇಘಾ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವವು ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ. 2019–20ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ಒಟ್ಟು 13,207 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ.

ಒಟ್ಟು 44 ವಿದ್ಯಾರ್ಥಿಗಳು 74 ಸ್ವರ್ಣ ಪದಕಗಳನ್ನು ಪಡೆಯಲಿದ್ದು, ಸ್ನಾತಕೋತ್ತರ ಗಣಿತ ವಿಭಾಗದ ವಿದ್ಯಾರ್ಥಿನಿ ಮೇಘಾ ಎಸ್‌.ಎನ್‌. ಅವರು ನಾಲ್ಕು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳಲಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ‘ಬೆಂಗಳೂರಿನ ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ನ ಅಧ್ಯಕ್ಷ ಡಾ.ಗುರುರಾಜ್‌ ಕರಜಗಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವಥನಾರಾಯಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ’ ಎಂದರು.

ADVERTISEMENT

‘ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಮಂಡಳಿಯ ಅಧ್ಯಕ್ಷ ಡಾ.ಎಂ.ಕೆ.ರಮೇಶ್ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಲಾಗುವುದು. ಏಳು ಜನರಿಗೆ ಪಿಎಚ್‌ಡಿ ಹಾಗೂ ಇಬ್ಬರಿಗೆ ಎಂ.ಫಿಲ್‌ ಪದವಿ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.

‘6,873 ವಿದ್ಯಾರ್ಥಿನಿಯರು ಹಾಗೂ 4,319 ವಿದ್ಯಾರ್ಥಿಗಳು ಸೇರಿ ಒಟ್ಟು 11,193 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. 1,189 ವಿದ್ಯಾರ್ಥಿನಿಯರು ಹಾಗೂ 824 ವಿದ್ಯಾರ್ಥಿಗಳು ಸೇರಿ ಒಟ್ಟು 2,014 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ’ ಎಂದರು.

‘ಸ್ನಾತಕ ಪದವಿಗಳಲ್ಲಿ 3 ವಿದ್ಯಾರ್ಥಿಗಳು ಹಾಗೂ 9 ವಿದ್ಯಾರ್ಥಿನಿಯರು ಸೇರಿ ಒಟ್ಟು 12 ವಿದ್ಯಾರ್ಥಿಗಳು ಒಟ್ಟು 19 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಗಳಲ್ಲಿ 8 ವಿದ್ಯಾರ್ಥಿಗಳು ಹಾಗೂ 24 ವಿದ್ಯಾರ್ಥಿನಿಯರು ಸೇರಿ ಒಟ್ಟು 32 ವಿದ್ಯಾರ್ಥಿಗಳು 55 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ’ ಎಂದು ಕುಲಪತಿ ಮಾಹಿತಿ ನೀಡಿದರು.

‘ಕೋವಿಡ್‌ ಸಂಕಷ್ಟದ ನಡುವೆಯೂ ನಮ್ಮ ಪ್ರಾಧ್ಯಾಪಕರು ಉತ್ತಮವಾಗಿ ಪಾಠ ಮಾಡಿದ್ದಾರೆ. ಲಾಕ್‌ಡೌನ್‌ ವೇಳೆಯಲ್ಲಿ 2,174 ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಂಡಿದ್ದಾರೆ. 118 ಪೇಪರ್‌ ಪ್ರೆಸೆಂಟೇಷನ್‌ ಮಾಡಿದ್ದಾರೆ. 143 ಕಾರ್ಯಾಗಾರಗಳು ನಡೆದಿವೆ. ಲಾಕ್‌ಡೌನ್‌ ವೇಳೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ ದೇಶದ ಎರಡು ವಿಶ್ವವಿದ್ಯಾಲಯಗಳ ಪೈಕಿ ದಾವಣಗೆರೆಯೂ ಒಂದಾಗಿದೆ ಎಂದು ನ್ಯಾಕ್‌ ಸಮಿತಿ ಅಭಿಪ್ರಾಯಪಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಚಟುವಟಿಕೆ ಬಗ್ಗೆ ಕಳೆದ ನಾಲ್ಕು ವರ್ಷಗಳ ವರದಿಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಐದನೇ ವರ್ಷದ ವರದಿಯನ್ನು ಈ ತಿಂಗಳು ಸಲ್ಲಿಸಲಾಗುವುದು. ಮುಂದಿನ ತಿಂಗಳು ನ್ಯಾಕ್‌ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮೌಲ್ಯಾಂಕನ ಮಾಡಿ ನ್ಯಾಕ್‌ ಕ್ರಮಾಂಕವನ್ನು ಘೋಷಿಸಲಿದೆ’ ಎಂದು ಕುಲಪತಿ ಹೇಳಿದರು.

ಕುಲಸಚಿವೆ (ಆಡಳಿತ) ಪ್ರೊ. ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಪ್ರಿಯಾಂಕಾ ಡಿ., ಸಿಡಿಕೇಟ್‌ ಸದಸ್ಯರು ಹಾಗೂ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

**

ಕೋವಿಡ್‌ ನಡುವೆಯೂ ಫಲಿತಾಂಶ ಹೆಚ್ಚಳ

2018–19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ 2019–20ನೇ ಸಾಲಿನಲ್ಲಿ ಕೋವಿಡ್‌ ಸಂಕಷ್ಟದ ನಡುವೆಯೂ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

‘2018–19ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ 56.55 ಫಲಿತಾಂಶ ಬಂದಿತ್ತು. ಈ ವರ್ಷ ಶೇ 60.57ರಷ್ಟು ಫಲಿತಾಂಶ ಬಂದಿದ್ದು, ಶೇ 4ರಷ್ಟು ಏರಿಕೆಯಾಗಿದೆ. ಅದೇ ರೀತಿ ಕಳೆದ ಸಾಲಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ 82.87 ಫಲಿತಾಂಶ ಲಭಿಸಿತ್ತು. ಈ ಬಾರಿ ಶೇ 95.31ರಷ್ಟು ಫಲಿತಾಂಶ ಬಂದಿದ್ದು, ಶೇ 12.44ರಷ್ಟು ಏರಿಕೆಯಾಗಿದೆ’ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಪ್ರೊ.ಅನಿತಾ ಎಚ್‌.ಎಸ್‌ ಮಾಹಿತಿ ನೀಡಿದರು.

ಕೋವಿಡ್‌ ಕಾರಣಕ್ಕೆ ಹಲವರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂಥವರ ಸಲುವಾಗಿ ವಿಶೇಷ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಅನುತ್ತೀರ್ಣ ವಿದ್ಯಾರ್ಥಿಗಳು ಸೇರಿ ಒಟ್ಟು 13,542 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದರು. ಇವರ ಪೈಕಿ 6,154 (ಶೇ 45) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೋರ್ಸ್‌ ಪೂರ್ಣಗೊಳಿಸಿ ಉದ್ಯೋಗ ಹುಡುಕಿಕೊಳ್ಳಲು ಈ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

*

ಚಿನ್ನದ ಹುಡುಗಿಗೆ ಉಪನ್ಯಾಸಕಿಯಾಗುವ ಕನಸು

ಸಂತೇಬೆನ್ನೂರು: 2019–20ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಎಂ.ಎಸ್ಸಿ ಗಣಿತದಲ್ಲಿ ಒಟ್ಟು ಶೇ 90.6 ಅಂಕ ಪಡೆದು ನಾಲ್ಕು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿನಿ ಎಸ್‌.ಎನ್‌. ಮೇಘಾ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

‘ವಿದ್ಯಾಭ್ಯಾಸದ ವಿವಿಧ ಹಂತಗಳಲ್ಲಿ ಬೋಧಕರ ಸಕಾಲಿಕ ಮಾರ್ಗದರ್ಶನ ಹಾಗೂ ತಂದೆಯ ಪ್ರೇರಣೆಯಿಂದ ನಾಲ್ಕು ಚಿನ್ನದ ಪದಕಗಳನ್ನು ಪಡೆಯಲು ಸಾಧ್ಯವಾಯಿತು’ ಎಂದು ಎಸ್.ಎನ್.ಮೇಘಾ ಸಂತಸ ವ್ಯಕ್ತಪಡಿಸಿದರು.

‘ಸಂತೇಬೆನ್ನೂರಿನ ಎಸ್.ಎಸ್.ಜೆವಿಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯು ಶಿಕ್ಷಣ ಪಡೆದಿದ್ದೆ. ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ. ನಾನು ಪಿಯುನಲ್ಲಿ ಕಲಾ ವಿಭಾಗಕ್ಕೆ ಸೇರಲು ಹೋಗಿದ್ದೆ. ಗಣಿತದಲ್ಲಿ 80 ಅಂಕಗಳು ಪಡೆದಿದ್ದರಿಂದ ಆಗಿನ ಶ್ರೀನಿವಾಸ್ ಎಂಬ ಗಣಿತ ಉಪನ್ಯಾಸಕರು ವಿಜ್ಞಾನ ವಿಭಾಗಕ್ಕೆ ಸೇರಲು ಸ್ಫೂರ್ತಿ ತುಂಬಿದರು. ಅದೇ ಇಂದಿನ ಸಾಧನೆಗೆ ಮೆಟ್ಟಿಲು’ ಎಂದು ಸ್ಮರಿಸಿದರು.

‘ತಂದೆ ನಾಗರಾಜ್ ದಾವಣಗೆರೆಯ ಎಸ್.ಎಸ್.ಎಂ ನಗರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹಾಗೂ ತಾಯಿ ಸುಧಾ ನನ್ನ ಸಾಧನೆಗೆ ಪ್ರೇರಣೆ ನೀಡಿದರು. ದಾವಣಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿಯಲ್ಲಿ ಶೇ 75 ಅಂಕ ಗಳಿಸಿದ್ದೆ. ನಂತರ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ತರಬೇತಿ ಪಡೆದೆ. ಅಲ್ಲಿನ ವಾಮದೇವ್ ಸರ್ ಹಾಗೂ ಶಶಿಕಲಾ ಮೇಡಂ ಎಂ.ಎಸ್ಸಿ ಓದಲು ಪ್ರೋತ್ಸಾಹಿಸಿದರು’ ಎಂದು ನೆನಪಿಸಿಕೊಂಡರು.

‘ನೆಟ್ ಪರೀಕ್ಷೆ ಬರೆದು ಉಪನ್ಯಾಸಕ ವೃತ್ತಿಯನ್ನು ಕೈಗೊಳ್ಳಲು ಇಚ್ಛಿಸಿದ್ದೇನೆ. ಪಿಎಚ್‌ಡಿಗೆ ಸಿದ್ಧತೆ ನಡೆಸಿದ್ದೇನೆ’ ಎಂದು ಮಾಹಿತಿ ನೀಡಿದರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.