ADVERTISEMENT

ವಿದ್ಯಾರ್ಥಿನಿಯರ ಚಿನ್ನದ ಪದಕಗಳ ಬೇಟೆ

ದಾವಣಗೆರೆ ವಿವಿಯಲ್ಲಿ 10ನೇ ಘಟಿಕೋತ್ಸವ l ವಿದ್ಯಾರ್ಥಿಗಳ ಮೊಗದಲ್ಲಿ ಸಾಧನೆ ಸಂತೃಪ್ತಿ

ಡಿ.ಕೆ.ಬಸವರಾಜು
Published 1 ಮಾರ್ಚ್ 2023, 4:21 IST
Last Updated 1 ಮಾರ್ಚ್ 2023, 4:21 IST
ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದವರು.
ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದವರು.   

ದಾವಣಗೆರೆ: ವಿದ್ಯಾರ್ಥಿಗಳ ಮೊಗದಲ್ಲಿ ಸಾಧನೆ ಮಾಡಿದ ಸಂತೃಪ್ತಿ. ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಂಡ ಪೋಷಕರಲ್ಲಿ ನಿರಾಳ ಭಾವ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಶಿಷ್ಯಂದಿರ ಸಾಧನೆ ಕಂಡ ಪ್ರಾಧ್ಯಾಪಕರಲ್ಲಿ ಹೆಮ್ಮೆ.

ಇವು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 10ನೇ ಘಟಿಕೋತ್ಸವದಲ್ಲಿ ಕಂಡು ಬಂದಂಥವು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ರ‍್ಯಾಂಕ್‌ ಪ್ರಮಾಣಪತ್ರ ಹಾಗೂ ಚಿನ್ನದ ಪದಕ, ಫಲಕಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಧನ್ಯತಾ ಭಾವ ಮರೆದರು.

ADVERTISEMENT

2021–22ನೇ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳೆರಡರಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು ವಿಶೇಷ. ಸ್ನಾತಕ ಪದವಿಯಲ್ಲಿ 10 ವಿದ್ಯಾರ್ಥಿನಿಯರು ಹಾಗೂ ನಾಲ್ವರು ವಿದ್ಯಾರ್ಥಿಗಳು ಸೇರಿ 14 ವಿದ್ಯಾರ್ಥಿಗಳು 22 ಚಿನ್ನದ ಪದಕಗಳನ್ನು ಪಡೆದರೆ, ಸ್ನಾತಕೋತ್ತರ ಪದವಿಯಲ್ಲಿ 22 ವಿದ್ಯಾರ್ಥಿನಿಯರು ಹಾಗೂ 9 ವಿದ್ಯಾರ್ಥಿಗಳು ಸೇರಿ
31 ಮಂದಿ 59 ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡರು. ಒಟ್ಟು 81 ಸ್ವರ್ಣ ಪದಕಗಳನ್ನು ವಿತರಿಸಲಾಯಿತು.

ತಾಯಿಯ ಆಸೆ ಈಡೇರಿಸಿದ ಪುತ್ರಿ: ಬಿ.ಕಾಂ. ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದ ಕೆ.ಎಂ. ಮಾಧುರಿ ಅವರಿಗೆ ಎರಡು ಚಿನ್ನದ ಪದಕಗಳು ಲಭಿಸಿವೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದ ಮಾಧುರಿ ಅವರ ತಂದೆ ಮಾಲತೇಶ ಕುಮಾರ್ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಗೃಹಿಣಿ.

‘ಚಿನ್ನದ ಪದಕಗಳನ್ನು ಪಡೆಯಬೇಕು ಎಂಬ ತಾಯಿಯ ಆಸೆ ಈಡೇರಿಸಿದ್ದೇನೆ. ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡಿದ್ದು ರ‍್ಯಾಂಕ್ ಪಡೆಯಲು ಸಹಾಯವಾಯಿತು. ವಿಭಾಗದ ಮುಖ್ಯಸ್ಥರಾದ ಪುನೀತ್ ಅವರ ಮಾರ್ಗದರ್ಶನ, ಮನೆಯವರ ಬೆಂಬಲ ಯಶಸ್ಸಿಗೆ ಪ್ರೇರಣೆ. ಮುಂದೆ ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆ ಬರೆದು ನಾಗರಿಕ ಸೇವೆಗೆ ಸೇರುವ ಆಸೆ ಇದೆ’ ಎಂದು ಮಾಧುರಿ ಹೇಳಿದರು.

ಎಲ್ಲರೂ ಇಷ್ಟಪಡುವ ಹಾಗೆ ಪಾಠ ಮಾಡುವ ಆಸೆ: ಎಂ.ಎಸ್‌ಸಿ ಭೌತ ವಿಜ್ಞಾನದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಎರಡು ಸ್ವರ್ಣ ಪದಕಗಳನ್ನು ಪಡೆದಿರುವ ಆರ್.ಜ್ಯೋತಿ ಅವರ ತಂದೆ ಹೂವಿನ ವ್ಯಾಪಾರಿ. ಮಗಳ ಓದಿಗೆ ಕೊರತೆಯಾಗದಂತೆ ತಂದೆ–ತಾಯಿ ನೋಡಿಕೊಂಡಿದ್ದಾರೆ.

‘ಮೊದಲಿನಿಂದಲೂ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇತ್ತು. ಮಾದರಿ ಶಿಕ್ಷಕಿಯಾಗಬೇಕು ಎನ್ನುವ ಗುರಿ ಇದೆ. ಅದನ್ನೇ ಕೇಂದ್ರೀಕರಿಸಿದೆ. ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡಿದ್ದರಿಂದ ಜಾಸ್ತಿ ಒತ್ತಡ ಆಗಲಿಲ್ಲ. ಭೌತ ವಿಜ್ಞಾನ ಎಂದರೆ ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ. ಮಾದರಿ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳು ಇಷ್ಟಪಡುವಂತೆ ಪಾಠ ಮಾಡುವ ಗುರಿ ಇದೆ’ ಎಂದು ಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಬ್ಬು ಕಟಾವು ಮಾಡುವ ಪಾಲಕರು:ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ತವಡೂರು ತಾಂಡಾದ ದೀಪಾ ಎಲ್. ಅವರು ಬಿ.ಇಡಿಯಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ತಂದೆ ಲಕ್ಷ್ಮಣ ನಾಯ್ಕ್ ಹಾಗೂ ತಾಯಿ ಯಮುನಾಬಾಯಿ ಅವರು ಕಬ್ಬು ಕಟಾವು ಕೆಲಸ ಮಾಡಿ ಮಗಳನ್ನು ಓದಿಸಿದ್ದಾರೆ. ಒಬ್ಬರು ತಂಗಿ ಹಾಗೂ ಅಣ್ಣ ಇದ್ದಾರೆ.

‘ಕಲಾ ವಿಭಾಗದಲ್ಲೇ ಸಾಧನೆ ಮಾಡಿ, ಕಾನೂನು ವ್ಯಾಸಂಗಮಾಡುವ ಆಸೆ ಇತ್ತು. ಆದರೆ, ಪಾಲಕರು ಶಿಕ್ಷಕಿ
ಯಾಗಬೇಕು ಎಂದು ಆಸೆಪಟ್ಟರು. ಅವರ ಆಸೆಯನ್ನು ಈಡೇರಿಸಲಿದ್ದೇನೆ. ನಾವು ಯಾವುದೇ ವಿಷಯವಾದರೂ, ಅದಕ್ಕಾಗಿ ಸಮಯ ಮೀಸಲಿಟ್ಟು ಓದಬೇಕು. ಸವಾಲಾಗಿ ಸ್ವೀಕರಿಸಿದರೆ ಸಾಧನೆ ಮಾಡಬಹುದು’ ಎಂದು ದೀಪಾ ಅಭಿಪ್ರಾಯಪಟ್ಟರು.

ಬಿ.ಇಡಿಯಲ್ಲಿ ಮೊದಲ ರ‍್ಯಾಂಕ್ ಪಡೆದ ಆಯೇಷಾ ಖಾನಂ ಅವರು ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದು,
ತಂದೆ ಸಣ್ಣ ವ್ಯಾಪಾರಿ, ತಾಯಿ ಗೃಹಿಣಿ. ಚನ್ನಗಿರಿ ಮೂಲದ ಇವರು ಈಗಾಗಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಮುಂದೆ ಬೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದರು.

ಸಯೀದಾ ಮುಸ್ಕಾನ್ ಉನ್ನೀಸಾ ಅವರು ಎಂ.ಕಾಂನಲ್ಲಿ ಮೊದಲ ರ‍್ಯಾಂಕ್ ಪಡೆದಿರುವ ಇವರ ತಂದೆ ಬಿರ್ಲಾ ಫ್ಯಾಕ್ಟರಿಯ ನಿವೃತ್ತ ನೌಕರ. ತಾಯಿ ಗೃಹಿಣಿ. ‘ರ‍್ಯಾಂಕ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ಕಷ್ಟಪಟ್ಟು ಓದಿದ್ದಕ್ಕೆ ಫಲ ಸಿಕ್ಕಿತು’ ಎಂದು ಹೇಳುತ್ತಾರೆ.

ಅಜ್ಜಿಯ ನಿವೃತ್ತಿ ದಿನದಂದೇ ಪದಕ

ತಾಯಿಯನ್ನು ಕಳೆದುಕೊಂಡು, ಅಜ್ಜಿಯ ಆರೈಕೆಯಲ್ಲೇ ಬೆಳೆದ ಹಾಲಮ್ಮ ಬಿ. ಅವರು ಎಂ.ಕಾಂನಲ್ಲಿ 5 ಸ್ವರ್ಣ ಪದಕಗಳನ್ನು ಪಡೆಯುವ ಮೂಲಕ ‘ಚಿನ್ನದ’ ಹುಡುಗಿಯಾಗಿ ಹೊರಹೊಮ್ಮಿದರು.

3ನೇ ತರಗತಿ ಕಲಿಯುತ್ತಿರುವಾಗಲೇ ತಾಯಿ ನೇತ್ರಾವತಿಯನ್ನು ಕಳೆದುಕೊಂಡ ಹಾಲಮ್ಮ ಅವರನ್ನು ಬೆಳೆಸಿದ್ದು ಅಜ್ಜಿ ಶಂಭಮ್ಮ. ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಭಮ್ಮ ಅವರು ಮಂಗಳವಾರ ನಿವೃತ್ತರಾದರು. ದೇವಾಲಯದಲ್ಲಿ ಕೆಲಸ ಮಾಡಿ ಹಾಲಮ್ಮ ಅವರನ್ನು ಓದಿಸಿದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದಾರೆ.

‘ಪಾಠವನ್ನು ಲಕ್ಷ್ಯವಿಟ್ಟು ಕೇಳಿಸಿಕೊಳ್ಳುತ್ತಿದ್ದರ ಫಲವಾಗಿಯೇ ನನಗೆ ಚಿನ್ನದ ಪದಕಗಳು ಬಂದಿವೆ. ಎರಡು ಪದಕಗಳನ್ನು ನಿರೀಕ್ಷಿಸಿದ್ದೆ. 5 ಪದಕಗಳು ಬಂದವು. ನನ್ನ ಅಧ್ಯಯನಕ್ಕೆ ಅಧ್ಯಾಪಕರು ಸಹಕಾರ ನೀಡಿದರು. ಎನ್‌ಇಟಿ, ಕೆ–ಸೆಟ್ ಬರೆದು ಪಿಎಚ್‌.ಡಿ ಪಡೆಯುವ ಆಸೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಹಳ್ಳಿಯಲ್ಲಿ ಉದ್ಯಮ ಆರಂಭಿಸುವಾಸೆ

ಎಂ.ಬಿ.ಎ.ಯಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಮಾಯಕೊಂಡದ ಬಿ.ಎಂ.ಛಾಯಾ ಅವರು ಪಶುಸಂಗೋಪನಾ ಕ್ಷೇತ್ರದ ಒಂದು ಸ್ಟಾರ್ಟ್ ಅಪ್ ಕಂಪನಿ ಆರಂಭಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.

‘ತಂದೆ ಮೂರ್ತಪ್ಪ ಅವರು ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ತಂದೆಯ ಜಮೀನಿನಲ್ಲೇ ಒಂದು ಉದ್ಯಮ ಆರಂಭಿಸಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ದೊರೆಕಿಸಿಕೊಡಬೇಕು ಎಂಬ ಆಸೆ ಇದೆ’ ಎಂದು ಪಾಲಕರ ಮೂವರು ಹೆಣ್ಣು ಮಕ್ಕಳ ಪೈಕಿ ಎರಡನೇಯವರಾದ ಛಾಯಾ ಹೇಳಿದರು. ‘ಪರೀಕ್ಷೆಗೆ ಕಷ್ಟಪಟ್ಟು ಓದುವುದಲ್ಲ. ಇಷ್ಟಪಟ್ಟು ಛಲ ಬಿಡದೇ ಓದಿದ್ದೇನೆ. ರ‍್ಯಾಂಕ್ ಪಡೆಯಬೇಕು ಎನ್ನುವುದು ಅಮ್ಮನ ಕನಸು. ಅವರ ಕನಸ್ಸನ್ನು ನನಸು ಮಾಡಿದ್ದೇನೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.