ADVERTISEMENT

ದಾವಣಗೆರೆ: ಸರ್ಕಾರಿ ಶಾಲೆ ಅಭಿವೃದ್ಧಿಗೆ ನೆರವಿನ ಮಹಾಪೂರ

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ: ₹4.30 ಕೋಟಿ ದೇಣಿಗೆ ಸಂಗ್ರಹ

ರಾಮಮೂರ್ತಿ ಪಿ.
Published 2 ಜೂನ್ 2025, 7:09 IST
Last Updated 2 ಜೂನ್ 2025, 7:09 IST
ದಾವಣಗೆರೆಯ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ನೀಡಿದ ಬೆಂಚ್‌ನಲ್ಲಿ ಕುಳಿತಿರುವ ವಿದ್ಯಾರ್ಥಿಗಳು  
ದಾವಣಗೆರೆಯ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ನೀಡಿದ ಬೆಂಚ್‌ನಲ್ಲಿ ಕುಳಿತಿರುವ ವಿದ್ಯಾರ್ಥಿಗಳು     

ದಾವಣಗೆರೆ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಬಲವರ್ಧನೆಗಾಗಿ ರೂಪಿಸಿರುವ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಶಿಕ್ಷಣ ಪ್ರೇಮಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಯಕ್ರಮ ಜಾರಿಯಾದ ವರ್ಷದ ಅವಧಿಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಶ್ರೇಯೋಭಿವೃದ್ಧಿಗೆ ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಹಾಗೂ ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಡಿ ವಿವಿಧ ಕಂಪನಿಗಳು ₹4.30 ಕೋಟಿ ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿವೆ.  

ಜಿಲ್ಲೆಯ ವಿವಿಧ ತಾಲ್ಲೂಕುಗಳ ಒಟ್ಟು 214 ಸರ್ಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಮುಖ್ಯವಾಗಿ ಹಳೆಯ ವಿದ್ಯಾರ್ಥಿಗಳ ಸಂಘದವರು ಕೊಡುಗೆ ನೀಡುವ ಮೂಲಕ ತಾವು ಓದಿದ ಶಾಲೆಯ ಋಣ ತೀರಿಸುವ ಕೆಲಸಕ್ಕೆ ಮುಂದಾಗಿದ್ದಾರೆ‌.

ADVERTISEMENT

ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ₹1.85 ಕೋಟಿ ಮೌಲ್ಯದ ಪೀಠೋಪಕರಣಗಳನ್ನು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ದಾನದ ರೂಪದಲ್ಲಿ ನೀಡಿದ್ದಾರೆ‌. ಇನ್ನುಳಿದ ಮೊತ್ತದಲ್ಲಿ ಸಂಘ ಸಂಸ್ಥೆಗಳೇ ಶಾಲೆಗಳಿಗೆ ಅಗತ್ಯವಿರುವ ಕೊಠಡಿಗಳು, ಊಟದ ಹಾಲ್ ಹಾಗೂ ಇನ್ನಿತರ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿವೆ.

ನೋಟ್ ಪುಸ್ತಕ, ಸಮವಸ್ತ್ರ, ಕಂಪ್ಯೂಟರ್, ಕುರ್ಚಿ, ಟೇಬಲ್, ಪ್ರಿಂಟರ್, ಶಾಲಾ ಬ್ಯಾಗ್, ಸೌಂಡ್ ಸಿಸ್ಟಂ, ಗ್ರಂಥಾಲಯಕ್ಕೆ ಪುಸ್ತಕ, ಧ್ವಜ ಸ್ಥಂಭ ನಿರ್ಮಾಣ, ಗಡಿಯಾರ, ಕಿಟಕಿಗಳಿಗೆ ಸೊಳ್ಳೆ ಪರದೆ, ಸಿ.ಸಿ.ಟಿವಿ ಕ್ಯಾಮೆರಾ, ಸುಣ್ಣಬಣ್ಣ, ಅಡುಗೆ ಸಾಮಗ್ರಿ, ಶಾಲಾ ಗೇಟ್, ಫ್ಯಾನ್, ಶಾಲಾ ಆವರಣದ ತೋಟಕ್ಕೆ ವಿವಿಧ ಬಗೆಯ ಸಸಿಗಳು, ಸ್ಮಾರ್ಟ್ ಟಿವಿ, ತಟ್ಟೆ, ಲೋಟ, ಬ್ಯಾಟರಿ, ಯುಪಿಎಸ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಡೆಸ್ಕ್, ಫ್ರಿಡ್ಜ್, ಮೈಕ್ ಸೆಟ್ ಹೀಗೆ ವಿವಿಧ ವಸ್ತುಗಳನ್ನು ಹಳೆಯ ವಿದ್ಯಾರ್ಥಿಗಳು ಶಾಲೆಗಳಿಗೆ ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ‌. 

₹1000 ದಿಂದ ಹಿಡಿದು ಲಕ್ಷದವರೆಗೆ, ತಮ್ಮ ಆರ್ಥಿಕ ಸಾಮರ್ಥ್ಯಕ್ಕನುಸಾರ ದಾನಿಗಳು ನೆರವು ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಆ ಮೂಲಕ ತಮ್ಮ ಸಹಪಾಠಿಗಳು, ಕಿರಿಯ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ. 

ಹಲವು ಗ್ರಾಮಗಳಲ್ಲಿ ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ, ಹಣ ಸಂಗ್ರಹಿಸಿ ಕಲಿತ ಶಾಲೆಗೆ ದೇಣಿಗೆ ನೀಡಿದ್ದಾರೆ. ಇನ್ನೂ ಕೆಲವರು ವೈಯಕ್ತಿಕವಾಗಿಯೇ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಕರು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಬೆಂಗಳೂರಿನ ಇಂಡಿಯಾ ಸುಧಾರ್ ಸಂಸ್ಥೆಯು ಹರಿಹರ ತಾಲ್ಲೂಕಿನ 19 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೆರವು ನೀಡಿದೆ. ಕೆಲವು ಶಾಲೆಗಳಿಗೆ ಆಟದ ಸಾಮಗ್ರಿ ಒದಗಿಸಿದ್ದರೆ, ಇನ್ನೂ ಕೆಲವು ಶಾಲೆಗಳ ಗ್ರಂಥಾಲಯಗಳಿಗೆ ಸಾಕಷ್ಟು ಪುಸ್ತಕಗಳನ್ನು ವಿತರಿಸಿದೆ. ಕೆಲವು ಶಾಲೆಗಳಿಗೆ ಶೌಚಾಲಯಗಳನ್ನೂ ನಿರ್ಮಿಸಿಕೊಟ್ಟಿದೆ. 

ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಕೂಡ ಹರಿಹರ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ವಿಜ್ಞಾನ ಉಪಕರಣ, ಪೀಠೋಪಕರಣ, ಕಂಪ್ಯೂಟರ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಿದೆ. 

ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಅಲ್ಲಿನ ಶಿಕ್ಷಕರು ಗ್ರಾಮದ ಹಳೆಯ ವಿದ್ಯಾರ್ಥಿಗಳ ಗಮನಕ್ಕೆ ತಂದಾಗ ಅವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಕಲಿಸಿದ ಶಿಕ್ಷಕರಿಗೂ ಗೌರವ ನೀಡಿದ್ದಾರೆ.

ದಾವಣಗೆರೆಯ ನಿಟುವಳ್ಳಿಯಲ್ಲಿನ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಯಂಸೇವಾ ಸಂಸ್ಥೆಯೊಂದು ಲೇಖನ ಸಾಮಗ್ರಿ ವಿತರಿಸಿರುವುದು
ಕಲಿತ ಶಾಲೆಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಕಾಳಜಿ ತೋರಿದ್ದಾರೆ. ದಾವಣಗೆರೆಯು ದಾನಕ್ಕೆ ಹೆಸರಾಗಿದ್ದು ಶೈಕ್ಷಣಿಕ ಪ್ರಗತಿಗೆ ಇಲ್ಲಿನ ಜನರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನೆರವು ನೀಡಲು ಬಯಸುವ ದಾನಿಗಳು ನೇರವಾಗಿ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು
ಜಿ.ಕೊಟ್ರೇಶ್ ಡಿಡಿಪಿಐ
2024-25ನೇ ಸಾಲಿನಲ್ಲಿ ಬ್ಯಾಂಕ್‌ಗಳು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇನ್ನಿತರ ದಾನಿಗಳಿಂದ ₹3 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಶಾಲೆಗೆ ದೇಣಿಗೆ ರೂಪದಲ್ಲಿ ಪಡೆಯಲಾಗಿದೆ. ಡೆಸ್ಕ್ ಬೆಂಚ್ ನಲಿ ಕಲಿ ಪೀಠೋಪಕರಣ ಸೌಂಡ್ ಸಿಸ್ಟಂ ಬ್ಯಾಂಡ್ ಸೆಟ್ ಸೇರಿ ಹಲವು ಸಾಮಗ್ರಿಗಳನ್ನು ದಾನಿಗಳು ನೀಡಿರುವುದು ಶ್ಲಾಘನೀಯ
ನಾಗವೇಣಿ ಶಿಕ್ಷಕಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮ ಬಡಾವಣೆ ನಿಟುವಳ್ಳಿ
2024-25ನೇ ಸಾಲಿನಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತರಗತಿ ಕೊಠಡಿಗೆ ಸುಣ್ಣಬಣ್ಣ ಬಳಿಸಿದರು. ಒಟ್ಟು ₹1.20‌ ಲಕ್ಷ ಮೊತ್ತದಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಮೂಲಕ ನೆರೆಹೊರೆಯ ಗ್ರಾಮಗಳ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ
ಲಕ್ಷ್ಮಿನಾರಾಯಣ ಶಿಕ್ಷಕ ಕೆಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚನ್ನಗಿರಿ

ಸಂಸ್ಥೆಗಳಿಂದ ಶಾಲಾ ಕೊಠಡಿ

ಊಟದ ಸಭಾಂಗಣ ಕೊಡುಗೆ  ದಾವಣಗೆರೆ ಉತ್ತರ ವಲಯದ ಅಣಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾರತ್‌ ಎಲೆಕ್ಟ್ರಾನಿಕ್‌ ಸಂಸ್ಥೆಯವರು ₹1.30 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿ ಊಟದ ಹಾಲ್‌ ನಿರ್ಮಿಸಿಕೊಟ್ಟಿದ್ದಾರೆ.  ದಾವಣಗೆರೆ ಉತ್ತರ ವಲಯದ ಕೋಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬೆಂಗಳೂರಿನ ಶಾಲೆಗೆ ಹವಾನ ಫೌಂಡೇಷನ್ ವತಿಯಿಂದ ₹1 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. ದಾವಣಗೆರೆ ದಕ್ಷಿಣ ವಲಯದ ಕೈದಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಸೂರು ಸೋಪ್ ಆ್ಯಂಡ್ ಡಿಟರ್ಜೆಂಟ್ಸ್ ಲಿ. ಸಂಸ್ಥೆಯವರು ₹15 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಈ ಮೂರು ಸಂಸ್ಥೆಗಳು ಸಿಎಸ್‌ಆರ್‌ ನಿಧಿಯಡಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.